

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮದ್ಯಪಾನ ಮಾಡುವುದರಿಂದ ಆರೋಗ್ಯ, ವೈಯಕ್ತಿಕ ನಡವಳಿಕೆ, ಆರ್ಥಿಕ ಸ್ಥಿತಿಗತಿ, ಸಮಾಜದಲ್ಲಿ ಅಗೌರವ, ಕುಟುಂಬದಲ್ಲಿ ನೆಮ್ಮದಿ ಹಾಳಾಗುತ್ತದೆ. ವ್ಯಸನಿಗಳು ನಿಗ್ರಹ ಶಕ್ತಿ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಪರಿಪೂರ್ಣ ಮನಃಪರಿವರ್ತನೆಯಿಂದ ದುಶ್ಚಟಮುಕ್ತರಾಗಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಉಜಿರೆ ಲಾಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 256ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಜನಜಾಗೃತಿ ವೇದಿಕೆ ಮೂಲಕ ನಡೆಸಲ್ಪಡುವ ಮದ್ಯವರ್ಜನ ಶಿಬಿರಗಳು ಹೊಸ ಬದುಕಿಗೆ ಬೆಳಕಾಗುತ್ತಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಧೈರ್ಯದಿಂದ ಕುಡಿತ ಬಿಡುವ ದೃಢ ಹೆಜ್ಜೆಯನ್ನು ಹಾಕಬೇಕು. ಯಾವುದೇ ಸಂದರ್ಭ ಬಂದರೂ ಮರುವ್ಯಸನಕ್ಕೊಳಗಾಗದೆ ನವಜೀವನವೆಂಬ ಸುಜ್ಞಾನದೆಡೆಗೆ ಸಾಗಲು ದೃಢ ತೀರ್ಮಾನ ಕೈಗೊಳ್ಳಬೇಕು ಎಂದರು.
ಡಾ.ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಸುದರ್ಶನ್, ಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿ ವಿವೇಕ್ ವಿ.ಪಾಯ್ಸ ಹಾಗೂ ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ ರಾಜ್ಯದ ವಿವಿಧ ಕಡೆಗಳಿಂದ 64 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ಜಯಾನಂದ, ಆಪ್ತ ಸಮಾಲೋಚಕ ಜಿ.ಆರ್.ಮಧು, ಆರೋಗ್ಯ ಸಹಾಯಕಿ ಪ್ರಭಾ, ಜಾಗೃತಿ ಸೌಧದ ಪ್ರಬಂಧಕ ಕಿಶೋರ್ ಸಹಕರಿಸಿದರು.
+https://www.vijayavani.net/world-coastal-cleanup-day-2