

ಮುಳಬಾಗಿಲು: "ಹಾವು" ಎಂದಾಕ್ಷಣ ಭಯಗೊಂಡು ಮಾರುದ್ದ ಓಡುವ ಜನರಿದ್ದಾರೆ. ಇನ್ನು ಹಾವು ಕಚ್ಚಿದರೆ ಮುಗಿದೇ ಹೋಯ್ತು... ಪ್ರಾಣಭೀತಿಯಲ್ಲಿ ಔಷಧೋಪಚಾರ ಮಾಡಿಸಿಕೊಂಡು ಬದುಕಿದರೆ ಮರುಜನ್ಮವೇ ಪ್ರಾಪ್ತಿಯಾಯ್ತು ಎಂದು ನಿಟ್ಟುಸಿರು ಬಿಡುತ್ತಾರೆ. ಆದರೆ, ಇಲ್ಲೊಬ್ಬ ಕುಡಿದ ಅಮಲಿನಲ್ಲಿ ಹಾವೊಂದನ್ನು ಕೊರಳಿಗೆ ಸುತ್ತಿಕೊಂಡು ಬೈಕ್ ಏರಿದ್ದಾನೆ. ಸಾಲದ್ದಕ್ಕೆ ಒಂದು ಕೈಯಲ್ಲಿ ಮದ್ಯದ ಬಾಟಲಿ ಹಿಡಿದು, ಬಾಯಲ್ಲಿ ಹಾವನ್ನು ಕಚ್ಚಿಕಚ್ಚಿ ಸಾಯಿಸಿದ್ದಾನೆ!
ಹೌದು, ಇಂತಹದ್ದೊಂದು ಅಮಾನವೀಯ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಆಂಧ್ರ ಗಡಿಗೆ ಹೊಂದಿಕೊಂಡಿರುವ ಮುಷ್ಟೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮುಷ್ಟೂರು ಗ್ರಾಮದ ಶಿವುಕುಮಾರ್ ಎಂಬಾತ ಕಂಠಪೂರ್ತಿ ಕುಡಿದು ಈ ಅವಾಂತರ ಸೃಷ್ಟಿಸಿದ್ದಾನೆ. ಈತ ಬೈಕ್ನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಹಾವೊಂದು ಅಡ್ಡ ಬಂದಿದೆ. ಇದನ್ನು ಹಿಡಿದುಕೊಂಡ ಆತ ಬೈಕ್ ಮೇಲೆ ಕುಳಿತು ಮನಸೋಇಚ್ಛೆ ಕಚ್ಚಿ ಕೊಂದಿದ್ದಾನೆ.
ಇದನ್ನೂ ಓದಿರಿ ಕೊನೆಗೂ ನೀಟ್, ಜೆಇಇ ಮೇನ್ಸ್ ಎಕ್ಸಾಂ ಡೇಟ್ ಫಿಕ್ಸ್
ಇಷ್ಟಕ್ಕೆ ಸುಮ್ಮನಾಗದ ಆತ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಬೈಕ್ನಲ್ಲಿ ಒಂದು ರೌಂಡ್ ಬಂದಿದ್ದಾನೆ. ಕೊರಳಲ್ಲಿ ಹಾವು, ಒಂದು ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡೇ ಕುಣಿದು ಕುಪ್ಪಳಿಸಿದ್ದಾನೆ. ಹಾವಿನ ದೇಹವನ್ನು ಕಚ್ಚಿಕೊಂಡೂ ತಿಂದಿದ್ದಾನೆ. ಈ ಅವಾಂತರವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಬಕಾರಿ ಸಚಿವ ಎಚ್.ನಾಗೇಶ್ ಅವರ ಮತಕ್ಷೇತ್ರವಾದ ಮುಳಬಾಗಿಲುನಲ್ಲೇ ಕುಡುಕನೊಬ್ಬ ಮದ್ಯನಶೆಯಲ್ಲೇ ವನ್ಯಜೀವಿಯನ್ನು ಕೊಂದಿರುವುದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮನುಷ್ಯರು ಮತ್ತು ಇತರ ಪ್ರಾಣಿಗಳಿಗೆ ಹಾವು ಕಚ್ಚುವುದು ಸಾಮಾನ್ಯ. ಈ ಪ್ರಕರಣದಲ್ಲಿ ಮನುಷ್ಯನೇ ಹಾವನ್ನು ಕಚ್ಚಿಕಚ್ಚಿ ಕೊಂದಿರುವುದು ಆಘಾತಕಾರಿ. ಈತ ಕೊಂದ ಹಾವು ಯಾವುದು ಎಂದು ತಿಳಿದಿಲ್ಲ.
ಇದನ್ನೂ ಓದಿರಿ ಲಾಕ್ಡೌನ್ನಲ್ಲೇ ರಾಜಕುಮಾರಿ ಕಿರೀಟ ಧರಿಸಿದ ಪಿಗ್ಗಿ!