

ಗುರುಗುಂಟಾ: ಗ್ರಾಮದ ಸರ್ಕಾರಿ ಪ್ರೌಢಶಾಲೆ ರಾತ್ರಿ ಮದ್ಯವ್ಯಸನಿಗಳ ತಾಣವಾಗಿ ಪರಿವರ್ತನೆಯಾಗಿದೆ. ಸಂಜೆಯಾಗುತ್ತಿದ್ದಂತೆ ಮದ್ಯವ್ಯಸನಿಗಳು ಶಾಲೆಗೆ ಆಗಮಿಸುತ್ತಾರೆ.
ಮದ್ಯ ಸೇವನೆ ಬಳಿಕ ಬಾಟಲಿಗಳು, ಆಹಾರ ಪದಾರ್ಥ, ಸಿಗರೇಟನ್ನು ಕಟ್ಟಡ ಹಾಗೂ ಆವರಣದೆಲ್ಲೆಡೆ ಎಸೆಯುತ್ತಿದ್ದಾರೆ. ಮದ್ಯದ ಬಾಟಲಿಗಳನ್ನು ಎಸೆಯುವುದರಿಂದ ಗಾಜಿನ ಚೂರುಗಳು ಬಿದ್ದು ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. ಈ ಶಾಲೆ ಆವರಣದಲ್ಲಿ ಉರ್ದು ಶಾಲೆ, ಪ್ರಾಥಮಿಕ ಶಾಲೆ, ಜೂನಿಯರ್ ಕಾಲೇಜ್ ಕೂಡ ಇವೆ.
ಸಿಬ್ಬಂದಿ ನಿತ್ಯ ಶಾಲೆ ಕಟ್ಟಡ ಹಾಗೂ ಆವರಣದಲ್ಲಿನ ಮದ್ಯದ ಬಾಟಲಿಗಳು ಹಾಗೂ ಆಹಾರ ಪದಾರ್ಥ ಸೇದಿ ಎಸೆದ ಸಿಗರೇಟನ್ನು ಸ್ವಚ್ಛಗೊಳಿಸಬೇಕಾಗಿದೆ. ಕುಡಿದ ಮತ್ತಿನಲ್ಲಿ ಮಹಿಳೆಯರ ಶೌಚಗೃಹದ ಬಾಗಿಲು, ಕುಡಿಯುವ ನೀರಿನ ನಳದ ಪೈಪ್‌ಗಳನ್ನು ಕಿತ್ತು ಹಾಕಲಾಗಿದೆ. ಇದರಿಂದಾಗಿ ವಿದ್ಯಾರ್ಥಿನಿಯರು ಶೌಚಕ್ಕೆ ತೆರಳಲು ಮುಜುಗರ ಪಡುವಂತಾಗಿದೆ. ಕುಡಿಯುವ ನೀರಿಗಾಗಿ ಬೀದಿ ಬೀದಿ ಅಲೆಯುವಂತಾಗಿದೆ.