

ಬೆಂಗಳೂರು: ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಏ.14ವರೆಗೆ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಮದ್ಯ ಮಾರಾಟ ಸಹ ನಿಷೇಧಿಸಲಾಗಿದೆ. ಮದ್ಯ, ಸಿಗರೇಟ್, ಗುಟ್ಖಾ ಚಟ ಅಂಟಿಸಿಕೊಂಡಿರುವವರು ಕಿಕ್ಗಾಗಿ ಚಡಪಡಿಸುತ್ತಿದ್ದಾರೆ. ವ್ಯಸನಿಗಳ ಚಡಪಡಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಅಕ್ರಮ ಮಾರಾಟ ಮೂಲಕ ನಿಗದಿತ ದರಕ್ಕಿಂತ ಎರಡು, ಮೂರು ಪಟ್ಟು ಜಾಸ್ತಿ ವಸೂಲಿ ಮಾಡುತ್ತಿದ್ದಾರೆ. ಅಕ್ರಮ ಮಾರಾಟ ದಂಧೆ ಗೊತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.
ರಾಜ್ಯದೆಲ್ಲೆಡೆ ಕಾಳಸಂತೆಯಲ್ಲಿ ಮದ್ಯ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಮದ್ಯ, ಗುಟ್ಖಾ, ಸಿಗರೇಟ್ ಅಂಗಡಿ ಮುಚ್ಚಿರುವ ಪರಿಣಾಮ ಮಾರಾಟಗಾರರು/ ನೌಕರರು ಮುಖಬೆಲೆಗಿಂತ 50 ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕಾಳಸಂತೆಕೋರರು, ಮನೆ ಮತ್ತು ಅಂಗಡಿಗಳಲ್ಲಿ ಬಚ್ಚಿಟ್ಟುಕೊಂಡು ಶೇ.100 ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಈ ಕಾಳಸಂತೆ ವ್ಯವಹಾರ ಕೇವಲ ಮಹಾನಗರ, ನಗರ, ಪಟ್ಟಣಕ್ಕೆ ಸೀಮಿತವಾಗಿಲ್ಲ. ಹಳ್ಳಿಗಳಲ್ಲಿಯೂ ಜೋರಾಗಿಯೇ ಇದೆ. ದುಬಾರಿ ಬೆಲೆ ತೆತ್ತು ಕೆಲವರಂತೂ ಕುಡಿತ, ಜಿಗಿತ ಮತ್ತು ಧೂಮಪಾನದಲ್ಲಿ ತೊಡಗಿದ್ದಾರೆ. ಅಷ್ಟೊಂದು ಹಣ ಕೊಡಲು ಸಾಧ್ಯವಾಗದವರು ಮದ್ಯದಂಗಡಿ ತೆರೆಯುವುದನ್ನೇ ಕಾಯುತ್ತ ಕಾಲ ಕಳೆಯುತ್ತಿದ್ದಾರೆ.
ಬೆಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಾಳಸಂತೆಯಲ್ಲಿ ಮದ್ಯ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 1.25 ಲಕ್ಷ ರೂ. ಮೌಲ್ಯದ ಸರಕು ವಶಕ್ಕೆ ಪಡೆದಿದ್ದಾರೆ. ವಿಜಯನಗರದ ಆರ್ಪಿಸಿ ಲೇಔಟ್ ನಿವಾಸಿ ಧನಂಜಯ (29) ಮತ್ತು ಆರ್.ಟಿ.ನಗರದ ಸಂಜಯ್ (29) ಬಂಧಿತರು.
ಏ.2ರಂದು ಆರ್.ಟಿ.ನಗರದ ಅಪಾರ್ಟ್ವೆುಂಟ್ ಮೇಲೆ ದಾಳಿ ನಡೆಸಿದಾಗ, ದುಬಾರಿ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದುದು ಕಂಡುಬಂದಿದೆ. ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಟ್ಖಾ ಬೆಲೆ ದುಬಾರಿ
ಗುಟ್ಖಾ ಪದಾರ್ಥಗಳನ್ನೂ ನಿಷೇಧಿಸಲಾಗಿದೆ. ಆದರೂ ಕಾಳಸಂತೆಯಲ್ಲಿ 10 ರೂ. ಬೆಲೆಯ ವಿಮಲ್ 20 ರೂ.ಗೆ, 4 ರೂ. ಸ್ಟಾರ್ ಅನ್ನು 7 ರೂ.ಗೆ, ಸೂಪರ್-3 ರೂ. ಬದಲಿಗೆ 6 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಕೇಳದರೆ ಸರಬರಾಜು ಇಲ್ಲವೆಂದು ನೆಪ ಹೇಳುತ್ತಿದ್ದಾರೆ.
ಅಧಿಕಾರಿಗಳ ಆಲಸ್ಯ
ನಿಷೇಧದ ನಡುವೆ ಮದ್ಯ, ಸಿಗರೇಟ್ ಮತ್ತು ಗುಟ್ಖಾ ಮಾರಾಟ ನಡೆಯುತ್ತಿದ್ದರೂ ಪೊಲೀಸರು, ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಅಲ್ಲೊಂದು ಇಲ್ಲೊಂದು ಅಂಗಡಿ ತೆರೆದಿರುವಲ್ಲಿ ಅಕ್ರಮ ವ್ಯವಹಾರ ಪತ್ತೆ ಹಚ್ಚುವುದು ಸುಲಭದ ಕೆಲಸ. ಆದರೂ ಕೆಲವು ಕಡೆ ಗೊತ್ತಿದ್ದರೂ ಕ್ರಮಕೈಗೊಳ್ಳದೆ ಸುಮ್ಮನೆ ಇರುವುದು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.