ನಿಷೇಧವಿದ್ದರೂ ಮದ್ಯ ಸರಬರಾಜು: ಕುದೂರಿನಲ್ಲಿ ಕದ್ದುಮುಚ್ಚಿ ಮಾರಾಟ

2 OCT KUDUR - NAKALI MADYA NEWS PHOTO 1
Published on

ಕುದೂರು: ಅ.2ರ ಗಾಂಧಿ ಜಯಂತಿಯಂದು ಮದ್ಯ, ಮಾಂಸ ಮಾರಾಟಕ್ಕೆ ನಿಷೇಧವಿರುತ್ತದೆ. ಆದರೆ ಅದೇ ದಿನದಂದು ಕುದೂರಿನಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿದೆ. ಕೆಲವರು ಬೈಕುಗಳಲ್ಲಿ ಕದ್ದುಮುಚ್ಚಿ ಮಾರಾಟ ಮಾಡಿದ್ದಾರೆ.

ಇದು ಅ.2ರ ಒಂದು ದಿನದ ಕತೆಯಲ್ಲ. ಗ್ರಾಮದ ಸಂತೆ ಸರ್ಕಲ್ ಬಳಿ ಪ್ರತಿನಿತ್ಯ ಬೆಳಗ್ಗೆ 5 ಗಂಟೆಗೆ ಮದ್ಯ ದೊರೆಯುತ್ತಿದ್ದು, ಬೆಳಕಾಗುವಷ್ಟರಲ್ಲಿ ಮದ್ಯ ಮಾರಾಟ ಮಾಡಿ ಸ್ಥಳದಿಂದ ತೆರಳಿರುತ್ತಾರೆ. ಮದ್ಯದ ಚಟಕ್ಕೆ ಬಿದ್ದ ಕೆಲವರು ಬೆಳ್ಳಂ ಬೆಳಗ್ಗೆಯೇ ಮದ್ಯ ಸೇವಿಸಿ ರಸ್ತೆಯಲ್ಲಿ ಬೀಳುವುದು, ತೂರಾಡುವುದು ಮಾಮೂಲಾಗಿದೆ.

ಗ್ರಾಮದ ಪ್ರಮುಖ ಬಡಾವಣೆಗಳ ಪೆಟ್ಟಿಗೆ ಅಂಗಡಿಗಳಲ್ಲೂ ರಾಜಾರೋಷವಾಗಿ ಮಾರಾಟ ನಡೆಯುತ್ತಿದೆ. ಗ್ರಾಮದ ಲಕ್ಷ್ಮೀದೇವಿ ಬಡಾವಣೆಯ ಅಂಗಡಿ ಪಕ್ಕದಲ್ಲೇ ನೀರಿನ ಟ್ಯಾಂಕ್ ಇದ್ದು, ಅಂಗಡಿಯಲ್ಲಿ ಮದ್ಯ ಖರೀದಿಸಿ, ಟ್ಯಾಂಕ್ ನೀರು ಬೆರೆಸಿಕೊಂಡು ಕಣ್ಣಿಗೆ ರಾಚುತ್ತದೆ.

ಬಾರ್​ಗಳೆಲ್ಲ ಬಂದ್

ಗ್ರಾಮದ ಎಲ್ಲ ಮದ್ಯದಂಗಡಿ, ಮಾಂಸದಂಗಡಿಗಳು ಶುಕ್ರವಾರ ಮುಚ್ಚಿದ್ದವು. ಆದರೆ, ಅವಕಾಶ ಬಳಸಿಕೊಂಡ ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿರುವುದು ಕಂಡುಬಂದಿದೆ. ವೈನ್ಸ್ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗರು ಅಂಗಡಿ ಮುಂಭಾಗದಲ್ಲಿರುವ ಪೆಟ್ರೋಲ್ ಬಂಕ್ ಬಳಿ ರಹಸ್ಯವಾಗಿ ನಿಂತು ಶುಕ್ರವಾರ ಮದ್ಯಮಾರಾಟ ಮಾಡಿದರು. ಗ್ರಾಮದಲ್ಲಿ ಪರವಾನಗಿ ಇಲ್ಲದೆ ನಡೆಯುತ್ತಿರುವ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕುದೂರಿನಲ್ಲಿ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗುವುದು. | ಶಿವು ಬಾವಿಕಟ್ಟೆ ಅಬಕಾರಿ ಅಧಿಕಾರಿ, ಮಾಗಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net