ಕಾಳಸಂತೆಯಲ್ಲಿ ಮದ್ಯ ಮಾರಾಟ, ಡಿಸ್ಟ್ಟಿಲರಿಗಳಿಂದಲೇ ಡೀಲ್? ನಾಲ್ಕೈದು ಪಟ್ಟು ದರಕ್ಕೆ ಮಾರಾಟ

Most-Popular-Whiskey-Bourbon-Scotch-Glasses-1
Published on

ಶಿವರಾಜ ಎಂ. ಬೆಂಗಳೂರು

ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳುರು ಗ್ರಾಮಾಂತರ ಜಿಲ್ಲೆಯ ಮದ್ಯದಂಗಡಿಗಳಿಗೆ ಬೀಗ ಜಡಿದಿದ್ದರೂ ಅಕ್ರಮ ಮಾರಾಟಕ್ಕೆ ಬ್ರೇಕ್ ಬಿದ್ದಿಲ್ಲ. ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ನಾಲ್ಕೈದು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರು ಕೇಳಿಬಂದಿದೆ.

ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆ 213 ಮದ್ಯದಂಗಡಿಗಳಿಗೆ ಸೀಲ್ ಹಾಕಿದೆ. ಆದರೂ ಅಕ್ರಮವಾಗಿ ಮಾರಾಟವಾಗುತ್ತಿದ್ದು, ಇಷ್ಟೊಂದು ಪ್ರಮಾಣದ ಮದ್ಯ ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಇಲಾಖೆ ಅಧಿಕಾರಿಗಳೇ ತಲೆಕೆಡಿಸಿಕೊಳ್ಳುವಂತಾಗಿದೆ.

ಡಿಸ್ಟಿಲರಿಗಳಿಂದಲೇ ಡೀಲ್!: ಜಿಲ್ಲೆಯಲ್ಲಿ ನಾಲ್ಕು ಡಿಸ್ಟಿಲರಿಗಳಿದ್ದು, ಅವುಗಳನ್ನೂ ಸಹ ಲಾಕ್‌ಡೌನ್ ಮಾಡಲಾಗಿದೆ. ಮದ್ಯದಂಗಡಿ ತೆರೆಯಲು ಸಾಧ್ಯವಾಗದ ದಂಧೆಕೋರರು ಅಕ್ರಮವಾಗಿ ಡಿಸ್ಟಿಲರಿಗಳ ಮೂಲಕ ಡೀಲ್ ಕುದುರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಲೋಕಲ್ ಮದ್ಯದ ಟೆಟ್ರಾಪ್ಯಾಕ್‌ಗಳ ಮಾರಾಟ ಎಗ್ಗಿಲ್ಲದೆ ಸಾಗಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಈ ದಂಧೆ ನಡೆಯುತ್ತಿದೆ ಎಂಬ ಮಾತು ಹರಿದಾಡುತ್ತಿದೆ.

ಸ್ಟಾಕ್ ಲೆಕ್ಕ ಇಲ್ಲ: ದಿಢೀರ್ ಲಾಕ್‌ಡೌನ್ ೋಷಣೆಯಿಂದ ಅಬಕಾರಿ ಇಲಾಖೆ ತರಾತುರಿಯಲ್ಲಿ ಮದ್ಯದಂಗಡಿ ಬಾಗಿಲು ಮುಚ್ಚಿಸಿದೆ. ಇದರಲ್ಲಿ ಬಹುತೇಕ ಮದ್ಯದಂಗಡಿಯಲ್ಲಿ ಆಯಾ ದಿನ ಸ್ಟಾಕ್ ಲೆಕ್ಕ ಕೊಟ್ಟಿಲ್ಲ. ಇದರಿಂದ ಮದ್ಯದಂಗಡಿಗಳಲ್ಲಿ ಆ ದಿನ ಮಾರಾಟವಾದ ಸ್ಟಾಕ್ ಬಗ್ಗೆ ಇಲಾಖೆಯಲ್ಲಿ ಲೆಕ್ಕ ಸಿಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಕೆಲ ಮದ್ಯದಂಗಡಿಗಳಲ್ಲಿ ಎರಡು ಅಥವಾ ಮೂರು ಪ್ರವೇಶ ದ್ವಾರಗಳಿದ್ದು. ಮುಂಬಾಗಿಲ ಪ್ರವೇಶಕ್ಕಷ್ಟೆ ಸೀಲ್ ಮಾಡಲಾಗಿದೆ. ಹಿಂಬದಿ ಬಾಗಿಲುಗಳ ಮೂಲಕ ಅಕ್ರಮವಾಗಿ ಮದ್ಯ ಸಾಗಣೆ ನಡೆಯುತ್ತಿದೆ ಎನ್ನಲಾಗಿದೆ.

ಮದ್ಯ ಸೀಸ್: ಮಾ.24ರಿಂದ ಏ.13ರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಸಿದ ಜಾರಿ ಮತ್ತು ತನಿಖೆ ಚಟುವಟಿಕೆಯ ಕಾರ‌್ಯಾಚರಣೆಯಿಂದಾಗಿ 134 ಕಡೆ ದಾಳಿ ನಡೆಸಿ 3 ಪ್ರಕರಣ ಪತ್ತೆ ಹಚ್ಚಿ, 12.780 ಲೀಟರ್ ಭಾರತೀಯ ತಯಾರಿಕಾ ಮದ್ಯ ಮತ್ತು 3.250 ಲೀಟರ್ ಬೀಯರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

6 ತಂಡ ನಿಯೋಜನೆ: ಲಾಕ್‌ಡೌನ್ ಅವಧಿಯಲ್ಲಿ ಅಬಕಾರಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ನಾಲ್ಕು ತಾಲೂಕುಗಳ ವ್ಯಾಪ್ತಿಯಲ್ಲಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು 6 ತಂಡ ರಚಿಸಲಾಗಿದೆ.

ಮದ್ಯದಂಗಡಿ ಕಳ್ಳತನ: ಲಾಕ್‌ಡೌನ್ ಅವಧಿಯಲ್ಲಿ ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆ ತಾಲೂಕಿನ ಮದ್ಯದಂಗಡಿಯಲ್ಲಿ ತಲಾ ಒಂದು ಕಳ್ಳತನ ಪ್ರಕರಣ ದಾಖಲಾಗಿದೆ. ಗ್ರಾಮಗಳ ಗೂಡಂಗಡಿಗಳು, ತೋಟದ ಮನೆಗಳು, ಊರ ಹೊರವಲಯದ ಪ್ರದೇಶಗಳಲ್ಲಿ ಕಾಳಸಂತೆಯಲ್ಲಿ ಮದ್ಯ ಮಾರಾಟವಾಗುತ್ತಿರುವ ದೂರು ಕೇಳಿಬಂದರೆ ಎಂಆರ್‌ಪಿ ಬೆಲೆಗಿಂತ ನಾಲ್ಕೈದು ಪಟ್ಟು ಹೆಚ್ಚಿನ ದರಕ್ಕೆ ಬಿಕರಿಯಾಗುತ್ತಿದೆ. ಲಾಕ್‌ಡೌನ್ ಅವಧಿ ವಿಸ್ತರಣೆಯಾದಷ್ಟ್ಟೂ ದಂಧೆಕೋರರ ಜೇಬು ಭರ್ತಿಯಾಗುತ್ತದೆ. ಮದ್ಯಪ್ರಿಯರ ಜೇಬು ಖಾಲಿಯಾಗುತ್ತಿದೆ.

ಅಕ್ರಮ ಮದ್ಯ ಮಾರಾಟ ತಡೆಗೆ ಇಲಾಖೆ ಕಟ್ಟೆಚ್ಚರ ವಹಿಸಿದೆ. ಎಲ್ಲ ಮದ್ಯದಂಗಡಿ, ಡಿಸ್ಟಿಲರಿಗಳನ್ನು ಬಂದ್ ಮಾಡಲಾಗಿದೆ. ಎಲ್ಲಿಯಾದರೂ ಅಕ್ರಮವಾಗಿ ಮದ್ಯ ಮಾರಾಟ ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು. ರವೀಂದ್ರ, ಅಬಕಾರಿ ಇಲಾಖೆ ಉಪ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net