ಮದ್ಯ ಮಾರಾಟ ಬೇಕೆಂದ ವೈದ್ಯನಿಗೆ ಹೈ ಚಾಟಿ: ಮಾರಾಟ ಕೋರಿಕೆ ಅರ್ಜಿ ವಜಾ ಮಾಡಿದ ನ್ಯಾಯಾಲಯ

Alcohal-Web
Published on

ಬೆಂಗಳೂರು: ಲಾಕ್​ಡೌನ್ ಅವಧಿಯಲ್ಲೂ ರಾಜ್ಯದಲ್ಲಿ ದಿನದ ಸೀಮಿತ ಅವಧಿಗೆ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿದ್ದ ಮನೋವೈದ್ಯರೊಬ್ಬರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಿದೆ. ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ದಿ. ಬಿ.ಜಿ. ಕುಲಕರ್ಣಿ ಮೆಮೋರಿಯಲ್ ಲೀಗಲ್

ಟ್ರಸ್ಟ್​ನ ಅಧ್ಯಕ್ಷ ಡಾ. ವಿನೋದ್ ಕುಲಕರ್ಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿತು. ವಿಚಾರಣೆ ವೇಳೆ, ಅರ್ಜಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕರೊನಾ ಸೊಂಕು ಹರಡುತ್ತಿರುವ ಇಂಥ ತುರ್ತು ಸಂದರ್ಭಗಳಲ್ಲಿ ಆಹಾರ, ಚಿಕಿತ್ಸೆಯಂಥ ವಿಚಾರಗಳಿಗೆ ಆದ್ಯತೆ ನೀಡಬೇಕಿದೆ. ಒಬ್ಬ ವೈದ್ಯರಾಗಿರುವ ನೀವು ಅಂಥ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತೀರೆಂದು ಕೋರ್ಟ್ ಭಾವಿಸಿತ್ತು. ಆದರೆ, ಮದ್ಯದಂಗಡಿ ತೆರೆಯಲು ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.

ಎಲ್ಲಿ ದಿನಪೂರ್ತಿ: ಹಾಸನ, ಶಿವಮೊಗ್ಗ, ಚಾಮರಾಜನಗರ, ಗದಗ, ಹಾವೇರಿ, ಕೋಲಾರ, ರಾಮನಗರ, ಯಾದಗಿರಿ, ಚಿಕ್ಕಮಗಳೂರು, ಕೊಪ್ಪಳ ಮತ್ತಿತರರ ಜಿಲ್ಲೆಗಳಲ್ಲಿ ಮದ್ಯದಂಗಡಿಗಳನ್ನು ದಿನ ಪೂರ್ತಿ ತೆರೆಯುವ ಬಗ್ಗೆ ಪ್ಲಾ್ಯನಿಂಗ್ ರೂಪಿಸಲಾಗುತ್ತಿದೆ.

ನಿತ್ಯ 60 ಕೋಟಿ ರೂ.ನಷ್ಟ

ಮದ್ಯದಂಗಡಿ ಬಂದ್ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಸರ್ಕಾರಕ್ಕೆ ಅಂದಾಜು 55ರಿಂದ 60 ಕೋಟಿ ರೂ. ಆದಾಯ ನಷ್ಟವಾಗುತ್ತಿದೆ. ಪ್ರತಿ ತಿಂಗಳಿಗೆ ಅಬಕಾರಿ ಇಲಾಖೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಮದ್ಯ ಮಾರಾಟದಿಂದ ಆಂದಾಜು 1,500 ಕೋಟಿ ರೂ.ವರೆಗೆ ಆದಾಯ ಬರುತ್ತಿತ್ತು.

ವ್ಯಸನಿಗಳ ಆತ್ಮಹತ್ಯೆ

ರಾಜ್ಯದಲ್ಲಿ ಮದ್ಯ ಸಿಗದೆ ಅನೇಕ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ಯ ಸಿಗದಿರುವ ಹಿನ್ನೆಲೆಯಲ್ಲಿ ಕಳ್ಳಭಟ್ಟಿ, ನೀರಾ ಹಾಗೂ ಸೇಂದಿಗೆ ಮುಗಿಬಿದ್ದಿದ್ದಾರೆ.

ಪಾರ್ಸೆಲ್​ಗೆ ಅವಕಾಶ

ಬೇಕರಿ ತಿನಿಸುಗಳ ಪಾರ್ಸೆಲ್ ನೀಡುವುದಕ್ಕೆ ಕೇಂದ್ರ ಅವಕಾಶ ನೀಡಿದೆ. ಅದರಂತೆ, ಮದ್ಯದಂಗಡಿಗಳಿಗೂ ಪಾರ್ಸೆಲ್ ತೆಗೆದುಕೊಳ್ಳುವ ಅವಕಾಶ ನೀಡುವ ಸಾಧ್ಯತೆ ಇದೆ.

ಸರ್ಕಾರ ಪೊಲೀಸ್ ಇಲಾಖೆ ಜತೆ ರ್ಚಚಿಸಿ ಪ್ರತಿನಿತ್ಯ 3 ಗಂಟೆ ಮದ್ಯದಂಗಡಿ ತೆರೆಯಲು ಅವಕಾಶ ನೀಡಿದರೆ ಒಳ್ಳೆಯದು. ಇಲ್ಲದಿದ್ದರೆ ಈಗಾಗಲೇ ಸಂಗ್ರಹಿಸಿರುವ ಮದ್ಯ ಮಾರಾಟ ಮಾಡಲು ಅವಕಾಶ ನೀಡಬೇಕು. | ಹೊನ್ನಗಿರಿಗೌಡ-ಪ್ರಧಾನ ಕಾರ್ಯದರ್ಶಿ ರಾಜ್ಯ ವೈನ್ ಮರ್ಚೆಂಟ್ ಆಸೋಸಿಯೇಷನ್ ಬೆಳಗ್ಗೆ 5ರಿಂದ ರಾತ್ರಿ 10 ಗಂಟೆವರೆಗೆ ಒಬ್ಬ ಮದ್ಯವ್ಯಸನಿ ದಿನಕ್ಕೆ 8 ಕ್ವಾಟರ್​ವರೆಗೆ ಕುಡಿಯುತ್ತಾನೆ. ಅಂಥ ವ್ಯಸನಿಗೆ ಏಕಾಏಕಿ ಮದ್ಯ ಸಿಗದಿದ್ದರೆ ಏನು ಮಾಡಬೇಕೆಂದು ತೋಚುವುದಿಲ್ಲ. ಅಂಥವರು ಹತ್ತಿರದ ಮಾನಸಿಕ ಆಸ್ಪತ್ರೆ ಕೇಂದ್ರಗಳಲ್ಲಿ ತೆರಳಿ ಚಿಕಿತ್ಸೆ ಪಡೆಯಬೇಕು. | ಪಿ.ಸಿ.ಪ್ರದೀಪ್​ಕುಮಾರ್- ನಿಮ್ಹಾನ್ಸ್ ವೈದ್ಯ

ಸಾರಾಯಿ ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆ!

ಹುಬ್ಬಳ್ಳಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರಾಯಿ ಸಿಗಲಿಲ್ಲ ಎಂಬ ಖಿನ್ನತೆಯಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆ.ಕೆ. ನಗರ 2ನೇ ಕ್ರಾಸ್​ನ ಶಾನ್ ನವಾಜ ಅಬ್ದುಲಖಾದರ್ ಅರಬ (30) ಆತ್ಮಹತ್ಯೆ ಮಾಡಿಕೊಂಡಾತ. ಗೌಂಡಿ ಕೆಲಸ ಮಾಡಿಕೊಂಡಿದ್ದ ಈತ ಸಾರಾಯಿ ಚಟಕ್ಕೆ ಅಂಟಿಕೊಂಡಿದ್ದ. ಸಾರಾಯಿ ಸಿಗಲಿಲ್ಲ ಎಂದು ಬೇಸರಗೊಂಡು ಸೋಮವಾರ ಮನೆಯ ಮೇಲ್ಛಾವಣಿಗೆ ಸೀರೆ ಕಟ್ಟಿ ನೇಣು ಹಾಕಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net