21ರಿಂದ ಹತ್ತು ದಿನಗಳವರೆಗೆ ಕುಡಿತ ಬಿಡಿಸು ಶಿಬಿರ

oppo_2
ಹನೂರಿನಲ್ಲಿ ಸುತ್ತೂರು ಮಠ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ಕುಡಿತ ಬಿಡಿಸುವ ಶಿಬಿರ ಆಯೋಜಿಸುವ ಸಂಬಂಧ ಪೂರ್ವಭಾವಿ ಸಭೆ ನಡೆಯಿತು. ಡಾ.ಸೋಮಶೇಖರ್, ರಾಜೂಗೌಡ, ನಂಜುಂಡಸ್ವಾಮಿ, ವಿನೋದ್, ಸೋಮಶೇಖರ್ ಇತರರು ಇದ್ದರು.
Published on

ಹನೂರು: ಪಟ್ಟಣದ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ಸುತ್ತೂರು ಶ್ರೀ ವೀರ ಸಿಂಹಾಸನ ಮಠ, ಮೈಸೂರು ಜೆಎಸ್‌ಎಸ್ ಮಹಾ ವಿದ್ಯಾಪೀಠ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೆ.21 ರಿಂದ 10 ದಿನಗಳವರೆಗೆ ಕುಡಿತ ಬಿಡಿಸುವ ಶಿಬಿರವನ್ನು ಆಯೋಜಿಸಲಾಗಿದೆ. ಆದ್ದರಿಂದ ಮದ್ಯವ್ಯಸನಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಿಬಿರದ ಸಂಚಾಲಕ ಡಾ. ಸೋಮಶೇಖರ್ ತಿಳಿಸಿದರು.

ಪಟ್ಟಣದ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ಕುಡಿತ ಬಿಡಿಸುವ ಶಿಬಿರ ಆಯೋಜನೆ ಸಂಬಂಧ ಮಂಗಳವಾರ ಆಯೋಜಿಸಿದ್ದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮದ್ಯವ್ಯಸನಿಗಳಲ್ಲಿ ಕುಡಿತ ಬಿಡಿಸಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಸಲುವಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ತಾಲೂಕು ಕೇಂದ್ರಗಳಲ್ಲಿ 10 ದಿನಗಳವರೆಗೆ ಕುಡಿತ ಬಿಡಿಸುವ ಶಿಬಿರವನ್ನು 2014 ರಿಂದಲೂ ಆಯೋಜಿಸಲಾಗುತ್ತಿದೆ. ಈವರೆಗೂ ನಡೆದ 18 ಶಿಬಿರಗಳಲ್ಲಿ 1,152 ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೆ ಹೊಸದಾಗಿ ರಚನೆಯಾದ ಹನೂರು ತಾಲೂಕಿನಲ್ಲಿ ಇದೀಗ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಆದ್ದರಿಂದ ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಗೌಡ ಮಾತನಾಡಿ, ವ್ಯಕ್ತಿಯು ಕುಡಿತದ ಚಟಕ್ಕೆ ಒಳಗಾದರೆ ಅನಾರೋಗ್ಯಕ್ಕೆ ತುತ್ತಾಗುವುದರ ಜತೆಗೆ ಕುಟುಂಬದ ಮೇಲೆ ದುಷ್ಪಾರಿಣಾಮ ಬೀರುತ್ತದೆ. ಅಲ್ಲದೆ ಸಮಾಜದ ಸ್ವಾಸ್ಥೃವು ಹದಗೆಡುತ್ತದೆ. ಇದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಿಲ್ಲ. ಇದನ್ನು ಮನಗಂಡು ಸುತ್ತೂರು ಮಠ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠ ಈ ಶಿಬಿರವನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಆದ್ದರಿಂದ ತಾಲೂಕಿನ ಮದ್ಯವ್ಯವಸನಿಗಳು ಈ ಶಿಬಿರದಲ್ಲಿ ಭಾಗಿಯಾಗಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಪಂ ಸದಸ್ಯ ಸೋಮಶೇಖರ್, ಜಿಲ್ಲಾ ಹಾಪ್‌ಕಾಮ್ಸ್ ನಿರ್ದೇಶಕ ಶಿವಪುರ ಲೋಕೇಶ್, ಬಿಜೆಪಿ ಹನೂರು ಮಂಡಲಾಧ್ಯಕ್ಷ ವೃಷಭೇಂದ್ರಸ್ವಾಮಿ, ಕನ್ನಡಪರ ಸಂಘಟನೆಯ ವಿನೋದ್, ಮುಖಂಡರಾದ ಮಲ್ಲೇಶ್, ಕಾಂತರಾಜು, ಬಸವರಾಜು, ನಂಜುಂಡಸ್ವಾಮಿ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net