ಮದ್ಯದ ಅಮಲಿನಲ್ಲಿ ಲಾರಿ ಕ್ಲೀನರ್ ಕೊಲೆಗೈದ ಗುಂಪು

tumakuru murder
Published on

ಬೆಳಗಾವಿ: ಮದ್ಯದ ಅಮಲಿನಲ್ಲಿ ಆರಂಭವಾದ ಜಗಳದಿಂದ ಮಂಗಳವಾರ ತಡರಾತ್ರಿ ನಡೆದ ವ್ಯಕ್ತಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಮೂಲದ ಮಹ್ಮದ್ ಸಮಿವುಲ್ಲಾ ಶಫಿವುಲ್ಲಾ (41) ಕೊಲೆಯಾದ ವ್ಯಕ್ತಿ. ವಡಗಾಂವಿ ಪ್ರದೇಶದ ಮಂಗಾಯಿ ನಗರದ ರಾಜು ಲೋಕರೆ (22) ಬಂಧಿತ ಯುವಕ. ಮಂಗಳವಾರ ಚಿತ್ರದುರ್ಗದಿಂದ ಲಾರಿ ಚಾಲಕನೊಂದಿಗೆ ಬಂದಿದ್ದ ಕ್ಲೀನರ್ ಮಹ್ಮದ್ ಶಫಿವುಲ್ಲಾ, ಲಾರಿಯಲ್ಲಿದ್ದ ತೆಂಗಿನಕಾಯಿಯನ್ನು ಬೆಳಗಾವಿ ನಗರದ ಅಂಗಡಿಗಳಿಗೆ ತಲುಪಿಸಿದ್ದಾನೆ.

ನಂತರ ಎರಡು ದಿನಗಳ ಕಾಲ ನಗರದಲ್ಲಿಯೇ ಉಳಿದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರವಾಸ ಮುಗಿಸಿಕೊಂಡು ಮರಳಿ ಹೋಗುವ ಬಗ್ಗೆ ಲಾರಿ ಚಾಲಕ ಹಾಗೂ ಕ್ಲೀನರ್ ಮಹ್ಮದ್ ಮಾತನಾಡಿಕೊಂಡಿದ್ದಾರೆ. ರಾತ್ರಿ ಲಾರಿ ಚಾಲಕ ಮಲಗಿಕೊಂಡ ಸಂದರ್ಭದಲ್ಲಿ ಊಟ ಮಾಡಿಕೊಂಡು ಬರಲು ಮಹ್ಮದ್ ಹಳೆ ಪಿಬಿ ರಸ್ತೆ ಕಡೆಗೆ ಬಂದು ಬಾರ್‌ಗೆ ತೆರಳಿದ್ದಾನೆ.

ಈ ವೇಳೆ ಬಾರ್‌ನಲ್ಲಿ ರಾಜು ಲೋಕರೆ ಸೇರಿದಂತೆ ಆತನ ಇನ್ನಿಬ್ಬರ ಸ್ನೇಹಿತರೊಂದಿಗೆ ಮಹ್ಮದ್ ಸಹ ಮದ್ಯ ಸೇವನೆ ಮಾಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಮಹ್ಮದ್ ಹಾಗೂ ಇನ್ನುಳಿದ ಮೂವರೊಂದಿಗೆ ಜಗಳ ಆರಂಭವಾಗಿದೆ. ಇದರಿಂದಾಗಿ ಮಾಲೀಕ ನಾಲ್ವರನ್ನು ಬಾರ್‌ನಿಂದ ಹೊರಗೆ ಹಾಕಿದ್ದಾನೆ. ನಂತರ ನಾಲ್ಕು ಜನರು ಸಮೀಪದ ಯಲ್ಲಪ್ಪ ರಾಮಣ್ಣವರ ಎಂಬುವರ ಜಮೀನಲ್ಲಿ ಕುಳಿತು ಮತ್ತೆ ಮದ್ಯ ಸೇವನೆ ಮಾಡಿದ್ದಾರೆ.

ನಶೆಯಲ್ಲಿ ಮತ್ತೆ ಜಗಳ ವಿಕೋಪಕ್ಕೆ ತಿರುಗಿ ಮಹ್ಮದನನ್ನು ಮೂವರು ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಶೆ ಇಳಿದ ಬಳಿಕ ಆರೋಪಿ ರಾಜು ಲೋಕರೆ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net