

ಬೆಳಗಾವಿ : ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಹನುಮಂತ ತಮ್ಮಾಜಿ ಕೊಟಬಾಗಿ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರಿಂದ ಆಶೀರ್ವಾದ ಪಡೆದರು. ಅಲ್ಲದೆ, ಮದ್ಯವರ್ಜನ ಶಿಬಿರ ಸಂಯೋಜನೆಗೆ ಸರ್ಕಾರದಿಂದ ಅನುಮೋದಿತ ಕ್ರಿಯಾಯೋಜನೆಯಲ್ಲಿ ನಿಗದಿಪಡಿಸಿದಂತೆ 5 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು.
ನಂತರ ಧರ್ಮಾಧಿಕಾರಿಗಳ ಜತೆಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಸಂಯಮ ಮಂಡಳಿಯ ಸಹಯೋಗದೊಂದಿಗೆ ಸಮುದಾಯ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿದರು. ಸದ್ಯ ಸಮಾಜದಲ್ಲಿ ಮಾದಕ ವ್ಯಸನಿಗಳು ಹೆಚ್ಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಕ್ಕೆ ಮಂಡಳಿಯ ಹೆಸರನ್ನು ವ್ಯಸನಮುಕ್ತ ಸಲಹಾ ಮಂಡಳಿ ರೀತಿಯಲ್ಲಿ ಇಂದಿನ ಕಾಲಮಾನಕ್ಕೆ ಸರಿಯಾಗಿ ಮರುನಾಮಕರಣ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ರಾಜ್ಯದಲ್ಲಿರುವ ಜನಜಾಗೃತಿ ವೇದಿಕೆ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಯುವಜನತೆಗಾಗಿ ತಾಲೂಕು ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ನೀಡಬೇಕಿದೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕಿರುಚಿತ್ರ ರಚಿಸಿದ್ದು, ಜನಮಾನಸದಲ್ಲಿ ವ್ಯಸನದ ಭೀಕರತೆ ಬಿತ್ತರಿಸಿದಾಗ ಹೆಚ್ಚು ಜಾಗೃತಿ ಮೂಡಲು ಸಾಧ್ಯ. ಮಂಡಳಿಯ ಹೆಸರು ಬದಲಾವಣೆ ಪ್ರಸ್ತಾಪ ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ ಮಾತನಾಡಿ, ಕೋವಿಡ್-19 ನಿಯಂತ್ರಣದ ಮಾರ್ಗಸೂಚಿ ಪಾಲನೆಯಿಂದಾಗಿ ಕಳೆದ 9 ತಿಂಗಳಿನಿಂದ ಮದ್ಯವರ್ಜನ ಶಿಬಿರ ಆಯೋಜಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಿ ಶಿಬಿರ ಆಯೋಜಿಸುವ ಬಗ್ಗೆ ಯೋಚಿಸಲಾಗುವುದು ಎಂದರು.ಲಾಕ್‌ಡೌನ್ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಮೂಲಕ ಸರ್ವೇ ನಡೆಸಿದಾಗ ಶೇ.85 ಜನ ಪಾನ ನಿಷೇಧದಿಂದ ಕುಟುಂಬಗಳಲ್ಲಿ ಸಂತೋಷ ನೆಲೆಸಿರುವುದಾಗಿ ಅಭಿಪ್ರಾಯ ತಿಳಿಸಿದ್ದಾರೆ ಎಂದರು. ಸಂಯಮ ಮಂಡಳಿ ಕಾರ್ಯದರ್ಶಿ ಶಂಕರಪ್ಪ, ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ ವಿ.ಪಿ., ಯೋಜನಾಧಿಕಾರಿ ಮೋಹನ ಹಾಗೂ ಜೈವಂತ ಪಟಗಾರ ಇದ್ದರು.