

ಬೆಂಗಳೂರು: ಕಾರ್ವಿುಕರ ಪರಿಸ್ಥಿತಿ ನಿಭಾಯಿಸಲು ಹೈರಾಣಾಗಿ ಹೋದ ಸರ್ಕಾರಕ್ಕೆ, ಈಗ ಮದ್ಯದ ಸಮಸ್ಯೆ ನಿಭಾಯಿಸಬೇಕಾದ ಮತ್ತೊಂದು ಸವಾಲು ಎದುರಾಗಿದೆ. ಒಂದೂವರೆ ತಿಂಗಳಿಂದ ಬಂದ್ ಆಗಿದ್ದ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವ ಕಾರಣ, ಎಲ್ಲ ಕಡೆಯಲ್ಲಿ ಬಂದೋಬಸ್ತ್ ತೀವ್ರಗೊಳಿಸಲಾಗಿದೆ.
ಮದ್ಯ ಮಾರಾಟದಲ್ಲಿ ಸಣ್ಣ ಗೊಂದಲವೂ ಆಗದಂತೆ ಎಲ್ಲವನ್ನು ಕಟ್ಟುನಿಟ್ಟಾಗಿ ನಿಭಾಯಿಸಬೇಕು ಎಂದು ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಅಂಗಡಿ ಬಳಿ ಮೊದಲ ದಿನ ನೂಕು ನುಗ್ಗಲು ಆಗಬಹುದು ಎನ್ನುವ ವರದಿಗಳು ಎಲ್ಲ ಜಿಲ್ಲೆಗಳಿಂದಲೂ ಬಂದಿರುವ ಹಿನ್ನೆಲೆಯಲ್ಲಿ ಪ್ರತಿ ಅಂಗಡಿಯ ಮುಂದೆ ಬ್ಯಾರಿಕೇಡ್ ಹಾಕಿ, ಪೊಲೀಸ್ ಬಂದೋಬಸ್ತ್ ಮಾಡಬೇಕು. ಸ್ಟಾಕ್ ಮುಗಿದ ಬಳಿಕ ಗಲಾಟೆಗಳು ಆಗುವ ಸಾಧ್ಯತೆಗಳಿರುವ ಕಾರಣ, ಒಂದು ತಂಡವಾಗಿ ಜಿಲ್ಲಾಡಳಿತವೇ ಜವಾಬ್ದಾರಿ ಹೊತ್ತು ಸಮಸ್ಯೆ ನಿಭಾಯಿಸಬೇಕು ಎಂದು ತಾಕೀತು ಮಾಡಲಾಗಿದೆ.
ಹೆಚ್ಚು ಮದ್ಯ ಕೊಳ್ಳಲು ಸ್ಥಳೀಯ ರಾಜಕೀಯ ಪ್ರಭಾವ ಬಳಸಬಹುದು. ಒಬ್ಬ ವ್ಯಕ್ತಿಗೆ ಒಂದೂವರೆ ಫುಲ್ ಬಾಟಲ್, ನಾಲ್ಕು ಬಿಯರ್ ಎಂದು ಸರ್ಕಾರ ಬಿಗದಿ ಮಾಡಿರುವ ಕಾರಣ, ಅದನ್ನೂ ಮೀರಿ ಕೊಡುವಂತೆ ತಗಾದೆ ತೆಗೆಯಬಹುದು ಎಂದು ಅಬಕಾರಿ ಇಲಾಖೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ಕ್ಯೂನಲ್ಲಿ ಬಂದವರಿಗೆ ಮಾತ್ರ ನಿಯಮಾವಳಿ ಪ್ರಕಾರವೇ ಮದ್ಯ ನೀಡಬೇಕು ಎಂದು ಸರ್ಕಾರ ಸೂಚಿಸಿದೆ. ಒಂದೊಮ್ಮೆ ಕಾಳಸಂತೆಯಲ್ಲಿ ಮಾರಾಟಕ್ಕೆ ದಂಧೆ ನಡೆಸುವವರೇ ಕ್ಯೂ ನಿಂತು ಮದ್ಯ ಖರೀದಿ ಮಾಡಲು ಮುಂದಾದರೆ, ಅಂತವರ ಬಗ್ಗೆ ಪೊಲೀಸ್ಗೆ ಮಾಹಿತಿ ನೀಡಿ ಪ್ರಕರಣ ದಾಖಲು ಮಾಡಿ, ಬಂಧಿಸಬೇಕು ಎಂದು ತಿಳಿಸಲಾಗಿದೆ.
ಮಧ್ಯಾಹ್ನಕ್ಕೆ ಬಂದ್
ಬೆಳಗ್ಗೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಮಧ್ಯಾಹ್ನದೊಳಗೆ ಮುಗಿಸುವಂತೆ ಶಿವಮೊಗ್ಗ ಸೇರಿ ಕೆಲ ಜಿಲ್ಲಾಡಳಿತಗಳು ಸೂಚನೆ ನೀಡಿದೆ. ಕೆಲ ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿಭಾಯಿಸಲು ಕ್ರಮ ಕೈಗೊಳ್ಳಲಾಗಿದೆ.