ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

Untitled design(12)
Published on

ಅಳವಂಡಿ: ಸಮೀಪದ ಮೊರನಾಳ ಗ್ರಾಮದಲ್ಲಿ ನರೇಗಾ ಕಾಮಗಾರಿಗಳನ್ನು ಮಂಗಳವಾರ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಪರಿಶೀಲಿಸಿದರು.

ಮೊರನಾಳ ನರೇಗಾ ಯೋಜನೆಯಡಿ ಸಂಸದರ ದತ್ತು ಗ್ರಾಮವಾಗಿ ಆಯ್ಕೆಯಾದ ಬೆಟಗೇರಿ ಗ್ರಾಪಂಗೆ ಒಳಪಡುತ್ತದೆ. ನರೇಗಾ ದತ್ತು ಗ್ರಾಮದ ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿಗಳನ್ನು ಆರಂಭಿಸಿ, ಮಾರ್ಚ್‌ರೊಳಗೆ ಮುಕ್ತಾಯಗೊಳಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಹಾಗೂ ತಾಂತ್ರಿಕ ಸಹಾಯಕರಿಗೆ ಸಿಇಒ ಸೂಚಿಸಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿಗೆ ವಿದ್ಯಾರ್ಥಿಗಳ ಕೊಠಡಿಗೆ ಭೇಟಿ ನೀಡಿ ಕಂಪ್ಯೂಟರ್ ಕಲಿಕಾ ಸಾಮರ್ಥ್ಯ ಕುರಿತು ಪರಿವೀಕ್ಷಣೆ ಮಾಡಿದರು. ನಂತರ ಮಕ್ಕಳೊಂದಿಗೆ ಆರೋಗ್ಯ ತಪಾಸಣೆ, ಪ್ರತಿ ದಿನ ಆಹಾರ ವಿತರಣೆ, ಮೊಟ್ಟೆ ಇತ್ಯಾದಿ ವಿತರಣೆ ಕುರಿತು ಚರ್ಚಿಸಿದರು.

ಶೌಚಗೃಹ ಪರಿಶೀಲಿಸಿದ ಸಿಇಒ ರಾಹುಲ್ ರತ್ನಂ ಪಾಂಡೇಯ, ಗ್ರಾಮದ ಓಣಿಯಲ್ಲಿರುವ ಮನೆಗೆ ಭೇಟಿ ನೀಡಿ ಶೌಚಗೃಹ ಇರುವ ಬಗ್ಗೆ ಮಾಹಿತಿ ಪಡೆದು ಪ್ರತಿ ದಿನ ಶೌಚಗೃಹ ಬಳಕೆ ಮಾಡುವಂತೆ ಮನವೊಲಿಸಿದರು. ಈಗಾಗಲೇ ಸರ್ಕಾರದಿಂದ ಪ್ರೋತ್ಸಾಹಧನ ವಿತರಿಸಿದ್ದು, ಅದರ ಸದ್ಬಳಕೆಯಾಗಲಿ. ಕಡ್ಡಾಯವಾಗಿ ಶೌಚಗೃಹ ಬಳಸಿ, ಇದರಿಂದ ಆರೋಗ್ಯ ಸುರಕ್ಷಿತ ಹಾಗೂ ಗ್ರಾಮದ ಸುತ್ತ-ಮುತ್ತಲೂ ನೈರ್ಮಲ್ಯ ವಾತಾವರಣ ಉಂಟಾಗುತ್ತದೆಂದರು.

ಪದ್ಮಶ್ರೀ ಪುರಸ್ಕೃತ ಭೀಮವ್ವ ಶಿಳ್ಳಿ ಕ್ಯಾತರ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ನರೇಗಾ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಬದು ಸುತ್ತಲೂ ತೆಂಗು ತೋಟ ನಿರ್ಮಾಣ ಕಾಮಗಾರಿ ವೀಕ್ಷಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಗ್ರಾಪಂ ಸದಸ್ಯ ಅಂದಪ್ಪ ಚೀಲಗೋಡ, ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರ, ತೋಟಗಾರಿಕೆ ಇಲಾಖೆ ಹೋಬಳಿ ಅಧಿಕಾರಿ ಬಸವರಾಜ, ಕಾರ್ಯದರ್ಶಿ ಮಂಜುನಾಥ, ತಾಂತ್ರಿಕ ಸಂಯೋಜಕಿ ಕವಿತಾ, ತಾಂತ್ರಿಕ ಸಹಾಯಕ ಪ್ರವೀಣ, ಬಿಎಫ್‌ಟಿ ಮಾಳಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net