

ಅಳವಂಡಿ: ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ದೇಶದಲ್ಲಿ ಗ್ರಾಮೀಣಾಭಿವೃದ್ಧಿ, ನೀರಾವರಿ, ಶಿಕ್ಷಣ, ಆರೋಗ್ಯ, ರಸ್ತೆ ಸೇರಿ ಇತರ ಕ್ಷೇತ್ರಗಳಲ್ಲಿ ಪ್ರಗತಿ ಕಾಣುತ್ತಿದೆ. ಅವರ ಕಾರ್ಯವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಕವಲೂರು ಗ್ರಾಮದಲ್ಲಿ ಶ್ರೀರಣದಾಂಬಿಕೆ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಈ ಭಾಗದ ರೈತ ಜೀವನಾಡಿಯಾದ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು ಕಾಮಗಾರಿ ತ್ವರಿತವಾಗಿ ನಡೆಯಲಿದೆ. ಇದರಿಂದ ನೀರಾವರಿ ಕನಸು ನನಸಾಗಲಿದೆ. ಕಾಲುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು 9 ಕೋಟಿ ರೂ. ಮಂಜೂರು ಮಾಡಲಾಗಿದೆ, ಬೆಳಗಟ್ಟಿ- ಮೈನಳ್ಳಿ ರಸ್ತೆ ಅಭಿವೃದ್ಧಿಗೆ ಲೋಕೊಪಯೋಗಿ ಸಚಿವರು ಅನುಮೋದನೆ ನೀಡಿದ್ದು ಎರಡು ಹಂತದಲ್ಲಿ ಕಾಮಗಾರಿ ನಡೆಯಲಿದೆ. ತಳಕಲ್ ಇಂಜಿನಿಯರಿಂಗ್ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ನಂತರ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ಉದ್ಘಾಟನೆ, ಶ್ರೀದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ, ಅಪೂರ್ಣಗೊಂಡ ಸಮುದಾಯ ಭವನಗಳ ವೀಕ್ಷಣೆ ಹಾಗೂ ಪಂಚಲಿಂಗೇಶ್ವರ ದೇವಸ್ಥಾನದ ಹತ್ತಿರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದರು. ಪ್ರಮುಖರಾದ ಪ್ರದೀಪಗೌಡ ಪಾಟೀಲ್, ಶರಣಪ್ಪಗೌಡ ಪಾಟೀಲ್, ಅಂದಾನಗೌಡ ಪಾಟೀಲ್, ದೇವಪ್ಪ ಹಳ್ಳಿ, ಬಸವರಡ್ಡಿ ರಡ್ಡೇರ, ಶ್ರೀನಿವಾಸ ಕಲಾದಗಿ, ತಿಮ್ಮಣ್ಣ, ನಿಂಗಪ್ಪ, ಸಂತೋಷ, ವೀರಯ್ಯ, ನಾಗಪ್ಪ, ದೇವಪ್ಪ, ಜಗದೀಶ, ಪೂಜಾರಪ್ಪ, ಬಸಣ್ಣ, ನಿಂಗಪ್ಪ ಬಳೂಟಗಿ, ಮಾರುತಿ, ಮಲ್ಲಪ್ಪ ಹಳ್ಳಿಗುಡಿ ಇತರರಿದ್ದರು.