

ಅಳವಂಡಿ: ಗ್ರಾಮದ ಮಧ್ಯಭಾಗದಲ್ಲಿ ಹಾಯ್ದು ಹೋಗಿರುವ ಶಿಗ್ಗಾಂವ-ಕಲ್ಮಲಾ ರಾಜ್ಯ ಹೆದ್ದಾರಿ ಬದಿಯ ಅಂಗಡಿ-ಮುಂಗಟ್ಟುಗಳನ್ನು ವ್ಯಾಪಾರಸ್ಥರು ಶನಿವಾರ ಸ್ವಯಂಪ್ರೇರಿತವಾಗಿ ತೆರವುಗೊಳಿಸಿದರು.
ರಸ್ತೆ ಬದಿ ಇದ್ದ ಅಂಗಡಿ-ಮುಂಗಟ್ಟುಗಳಿಂದ ಸಂಚಾರಕ್ಕೆ ಅಡಚಣೆಯಾಗಿತ್ತು ಮತ್ತು ಗ್ರಾಮದ ಅಂದವೂ ಕುಂದಿತ್ತು. ಈ ಸಂದರ್ಭದಲ್ಲೇ ಗ್ರಾಮದಿಂದ ಮುಂಡರಗಿ ಸರಹದ್ದಿನವರೆಗೆ ರಸ್ತೆ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದ್ದು ಇದಕ್ಕೆಲ್ಲ ಪರಿಹಾರ ಎನಿಸಿದೆ.
ಹಾಗೆಯೇ ಗ್ರಾಪಂ ಸಾಮಾನ್ಯ ಸಭೆಯಲ್ಲೂ ಗ್ರಾಮದ ರಸ್ತೆಯನ್ನು 80 ಅಡಿ ವಿಸ್ತರಣೆ ಮಾಡಲು ಒಪ್ಪಿಗೆ ಸೂಚಿಸಿ ಠರಾವು ಪಾಸು ಮಾಡಿತ್ತು. ಇದರ ಬೆನ್ನಲ್ಲೇ ವ್ಯಾಪಾರಸ್ಥರಿಗೆ ನೋಟಿಸ್ ನೀಡಿ ಅಂಗಡಿಗಳ ತೆರವಿಗೆ ಸೂಚಿಸಿತ್ತು.
ಇದನ್ನು ಒಪ್ಪದ ಕೆಲ ವ್ಯಾಪಾರಸ್ಥರು ರಸ್ತೆಯನ್ನು 80 ಅಡಿ ವಿಸ್ತರಿಸಿದರೆ ರಸ್ತೆ ಬದಿಯ ನೂರಾರು ವ್ಯಾಪಾರಿಗಳಿಗೆ ನಷ್ಟ ಉಂಟಾಗಲಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಶೆಡ್‌ಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದು, ರಸ್ತೆ ವಿಸ್ತರಣೆಯನ್ನು 60 ಅಡಿಗೆ ಸೀಮಿತಗೊಳಿಸುವಂತೆ ಗ್ರಾಪಂ, ಜಿಲ್ಲಾಧಿಕಾರಿಗೆ, ಶಾಸಕರಿಗೆ ಮನವಿ ಸಲ್ಲಿಸಿದ್ದರು.
ಆದರೂ, ರಸ್ತೆಯನ್ನು 80 ಅಡಿ ವಿಸ್ತರಿಸಲು ಗ್ರಾಪಂ ನಿರ್ಧರಿಸಿದ್ದರಿಂದ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ತೆರವು ಮಾಡುವ ಕಾರ್ಯದಲ್ಲಿ ನಿರತರಾದರು. ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿ ಜೆಸಿಬಿಯಿಂದ ಮುಂದುವರಿಯಿತು. ಅಂಗಡಿ ತೆರವಿನಿಂದ ವ್ಯಾಪರಸ್ಥರಿಗೆ ತೊಂದರೆಯಾಗಿದ್ದು, ಗ್ರಾಪಂ ಪರ್ಯಾಯ ವ್ಯವಸ್ಥೆ ಮಾಡಬೇಕು ಎನ್ನುವುದು ಕೆಲವರ ವಾದವಾಗಿದೆ.
ಕೋಟ್: ಗ್ರಾಮದ ಮಧ್ಯದಲ್ಲಿನ ರಸ್ತೆ ವಿಸ್ತರಣೆ ಮಾಡುವ ಸಲುವಾಗಿ ರಸ್ತೆ ಪಕ್ಕದ ವ್ಯಾಪಾರಸ್ಥರಿಗೆ ನೋಟಿಸ್ ನೀಡಿ ಅಂಗಡಿ ತೆರವಿಗೆ ಸೂಚಿಸಲಾಗಿತ್ತು. ಅದರಂತೆ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ತೆರವು ಮಾಡುತ್ತಿದ್ದಾರೆ. ರಸ್ತೆ ವಿಸ್ತರಣೆಯಿಂದ ಗ್ರಾಮ ಅಭಿವೃದ್ಧಿಯಾಗಲಿದೆ. ಕೊಟ್ರಪ್ಪ ಅಂಗಡಿ. ಪಿಡಿಒ ಗ್ರಾಪಂ ಅಳವಂಡಿ
ಕೋಟ್: ಗ್ರಾಮದ ಮಧ್ಯಭಾಗದಲ್ಲಿ ರಸ್ತೆ ವಿಸ್ತರಣೆ ಮಾಡುವುದರಿಂದ ಗ್ರಾಮ ಅಂದವಾಗಿ ಕಾಣಲಿದೆ ಹಾಗೂ ಡಿವೈಡರ್, ಸಿಸಿ ರಸ್ತೆ, ಚರಂಡಿ ನಿರ್ಮಾಣ, ಫುಟ್‌ಪಾತ್ ಆಗಲಿದೆ. ಗ್ರಾಮದ ಅಭಿವೃದ್ಧಿಗೆ ವ್ಯಾಪಾರಸ್ಥರು ಸಹಕರಿಸಿರುವುದು ಒಳ್ಳೆಯದಾಗಿದೆ.
ಗೂಳರಡ್ಡಿ ತವದಿ, ಗ್ರಾಮಸ್ಥ