

ಅಳವಂಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಉನ್ನತ ಶ್ರೇಣಿಯಲ್ಲಿ ಪಾಸಾದವರು ಖುಷಿಯಾದರೆ, ಕಡಿಮೆ ಅಂಕ ಪಡೆದವರು, ಫೇಲಾದವರೂ ಅಳು ಮೋರೆ ಇಟ್ಟುಕೊಂಡಿದ್ದಾರೆ.
ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಶೇ.54 ಅಂಕ ಪಡೆದು ಪಾಸಾಗಿರುವ ವಿಷಯ ತಿಳಿದು ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದು, ವಿಡಿಯೋ ವೈರಲ್ ಆಗಿದೆ. ಕಾತರಕಿ ಗ್ರಾಮದ ವಿದ್ಯಾರ್ಥಿ ಶಿವರಾಜ್, ಎಸ್ಸೆಸ್ಸೆಲ್ಸಿಯಲ್ಲಿ ಶೇ.54 ಅಂಕ ಪಡೆದು ಉತ್ತೀರ್ಣನಾಗಿದ್ದಾನೆ. ಮನೆಯಲ್ಲಿ ಪಾಲಕರು, ನೀನು ಪಾಸಾಗಲ್ಲ ಎಂದು ಹೇಳುತ್ತಿದ್ದರಂತೆ. ಗುರುವಾರ ಫಲಿತಾಂಶ ಹೊರಬಿದ್ದಿದೆ. ಭಯದಲ್ಲೇ ರಿಸಲ್ಟ್ ನೋಡಿದ ಶಿವರಾಜ್, ಪಾಸ್ ಆಗಿದ್ದು ಗೊತ್ತಾಗುತ್ತಿದ್ದಂತೆ ಆತನ ಖುಷಿಗೆ ಪಾರವೇ ಇರಲಿಲ್ಲ. ಅಲ್ಲದೆ ಸುರಿಯುತ್ತಿರುವ ಮಳೆಯಲ್ಲೇ ಕುಣಿದಾಡಿದ್ದು, ನಾನು ಪಾಸಾದೆ, ನಾನು ಎಸ್ಸೆಸ್ಸೆಲ್ಸಿ ಪಾಸಾದ್ನೆ ಎಪ್ಪಾ ಎಂದು ಸಂತೋಸ ವ್ಯಕ್ತಪಡಿಸಿದ್ದಾನೆ. ಈ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿರುವ ಮನೆಯವರು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ತುಂಬ ವೈರಲ್ ಆಗಿದೆ.