

ಅಳವಂಡಿ: ಚರ್ಮಗಂಟು ರೋಗಕ್ಕೆ ಸೂಕ್ತ ಚಿಕಿತ್ಸೆ, ಪರಿಹಾರ ಹಾಗೂ ಪಶುವೈದ್ಯರ ಕೊರತೆ ನೀಗಿಸುವಂತೆ ಒತ್ತಾಯಿಸಿ ಕವಲೂರು ಪಶು ಚಿಕಿತ್ಸಾಲಯ ಮುಂದೆ ರೋಗದಿಂದ ಸತ್ತ 2 ಎತ್ತು ಹಾಗೂ 6 ಮೇಕೆಗಳೊಂದಿಗೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥ ಮುತ್ತಣ್ಣ ಬಿಸರಳ್ಳಿ ಮಾತನಾಡಿ, ಚರ್ಮಗಂಟು ರೋಗದಿಂದ ಲಕ್ಷಾಂತರ ರೂ. ಬೆಲೆ ಬಾಳುವ ಎತ್ತುಗಳು ಹಾಗೂ ಹಸುಗಳು ಸಾಯುತ್ತಿವೆ. ಈ ರೋಗದಿಂದ ಜಾನುವಾರುಗಳು ಶಕ್ತಿಹೀನವಾಗುತ್ತಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಅಸುನೀಗುತ್ತಿವೆ. ದನಗಳನ್ನೇ ಜೀವನದ ಆಧಾರವಾಗಿಸಿಕೊಂಡ ಅನೇಕ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಗ್ರಾಮದ ಪಶು ಆಸ್ಪತ್ರೆಗೆ ಕಾಯಂ ವೈದ್ಯರಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಕಾಯಂ ವೈದ್ಯರನ್ನು ನೇಮಿಸಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರಾದ ಮಹಾಂತೇಶ ಸಿಂದೋಗಿ, ಭೀಮಣ್ಣ, ಈರಪ್ಪ ಕಟಗಾಲಿ, ಉಮೇಶ, ನಾಗಪ್ಪ, ನೀಲಪ್ಪ ಬಾವಿಕಟ್ಟಿ, ಹನುಮಂತ, ಭೀಮಪ್ಪ, ಲಕ್ಷ್ಮಣ, ನಿಂಗಪ್ಪ ಬಳೂಟಗಿ, ನಾಗಪ್ಪ, ಸಾರೆಪ್ಪ, ಮುತ್ತಣ್ಣ ಇತರರಿದ್ದರು.