

ಅಳವಂಡಿ: ಬೇಸಿಗೆ ಬಂತೆಂದರೆ ರಸ್ತೆಬದಿಯ ಗಿಡಮರಗಳು ನೀರಿಲ್ಲದೆ ಒಣಗಲಾರಂಭಿಸುತ್ತವೆ. ಅಲ್ಲದೆ ಅಗ್ನಿ ಅವಘಡ ಸಂಭವಿಸಿ ಆಹುತಿಯಾಗುತ್ತವೆ. ಹೀಗಾಗಿ ಇಲ್ಲಿನ ನೆಡುತೋಪು ಕಾವಲುಗಾರರು ನಿತ್ಯ ನೀರುಣಿಸುವುದು ಹಾಗೂ ಹಸಿ ಗೋಣಿಚೀಲವನ್ನು ವೃಕ್ಷಗಳಿಗೆ ಸುತ್ತುವ ಮೂಲಕ ರಕ್ಷಣೆಗೆ ಮುಂದಾಗಿದ್ದಾರೆ.
ಅಳವಂಡಿ-ಘಟ್ಟಿರಡ್ಡಿಹಾಳ ರಸ್ತೆಯ ಎರಡೂ ಬದಿ ಕಳೆದ ವರ್ಷ 900 ಗಿಡ ಹಾಗೂ ಕವಲೂರು-ಘಟ್ಟಿರಡ್ಡಿಹಾಳ ರಸ್ತೆ ಪಕ್ಕ 925 ಗಿಡಗಳನ್ನು ನೆಡಲಾಗಿದೆ. ಕೆಲ ದಿನಗಳ ಹಿಂದೆ ರಸ್ತೆ ಪಕ್ಕ ಬೆಳೆದ ಕಸ ಕಡ್ಡಿ ಹಾಗೂ ಹುಲ್ಲುಗಳಿಗೆ ಬೆಂಕಿ ಹಚ್ಚಿದ್ದರಿಂದ ಕೆಲ ಗಿಡಗಳು ಸುಟ್ಟಿವೆ. ಇದನ್ನು ಮನಗಂಡು ಅರಣ್ಯ ರಕ್ಷಕ ಜಂಬುನಾಥ ಹಕಾರಿ ಮಾರ್ಗದರ್ಶನದಲ್ಲಿ ನೆಡುತೋಪು ಕಾವಲುಗಾರರಾದ ರವಿ ಜೋಗಿನ ಹಾಗೂ ಸೀಮಣ್ಣ ಬೆಟಗೇರಿ ಗಿಡಗಳ ಸಂರಕ್ಷಣೆಗೆ ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ಪ್ರತದಿನ ಬೆಳಗಿನ ಜಾವ ಗಿಡಗಳಿಗೆ ನೀರಿನಲ್ಲಿ ಅದ್ದಿದ ಚೀಲ ಸುತ್ತಲಾಗುತ್ತದೆ. ಅಲ್ಲದೆ ಗಿಡದ ಸುತ್ತಲಿನ ಪ್ರದೇಶ ಸ್ವಚ್ಛಗೊಳಿಸುತ್ತಾರೆ. ಕಸವನ್ನು ದೂರದಲ್ಲಿ ರಾಶಿ ಹಾಕಿ ಬೆಂಕಿ ಹಚ್ಚಿ ನಾಶಮಾಡುತ್ತಿದ್ದಾರೆ. ಇದರಿಂದ ಬಿಸಿಲಿನ ತಾಪ ಹಾಗೂ ಅಗ್ನಿ ಅನಾಹುತ ತಡೆಯಬಹುದಾಗಿದೆ. ಆಡು, ಕುರಿ, ಜಾನುವಾರುಗಳಿಂದ ರಕ್ಷಿಸಲು ಗಿಡದ ಸುತ್ತ ಬೇಲಿ ಹಾಕುವುದು ಹಾಗೂ ಆಸರೆ ಕೋಲು ನೆಲಕ್ಕೆ ಬೀಳದಂತೆ ನೋಡಿಕೊಳ್ಳುತ್ತಿದ್ದಾರೆ. ವರ್ಷ ಪೂರ್ತಿ ಗಿಡಮರಗಳ ಆರೈಕೆಯಲ್ಲಿ ತೊಡಗಿರುವ ಇವರ ಪರಿಸರ ಪ್ರೀತಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಸ್ತೆಬದಿ ನೆಟ್ಟ ಗಿಡಗಳನ್ನು ನೆಡುತೋಪು ಕಾವಲುಗಾರರು ಅತ್ಯಂತ ಜತನದಿಂದ ಕಾಯುತ್ತಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ಉಂಟಾಗುವ ಕಾಡ್ಗಿಚ್ಚಿನಿಂದ ಗಿಡಗಳ ರಕ್ಷಣೆಗೆ ಹಸಿ ಗೋಣಿಚೀಲ, ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುತ್ತಾರೆ. ಪ್ರತಿದಿನ ಅವುಗಳ ರಕ್ಷಣೆ ಮಾಡುತ್ತಿದ್ದಾರೆ.| ಜಂಬುನಾಥ ಹಕಾರಿ, ಅರಣ್ಯ ರಕ್ಷಕ, ಕೊಪ್ಪಳ