ತುಂಬಿ ಹರಿದ ಹಳ್ಳ ಸಂಚಾರ ಅಸ್ತವ್ಯಸ್ತ

Untitled design(19)
Published on

ಅಳವಂಡಿ: ಮಳೆ ಆರ್ಭಟಕ್ಕೆ ಸಮೀಪದ ಅಳವಂಡಿ-ನಿಲೋಗಿಪುರ ರಸ್ತೆ ಮಧ್ಯದ ಹಿರೇಹಳ್ಳ ತುಂಬಿ ಹರಿಯುತ್ತಿದ್ದು, ಶುಕ್ರವಾರ ಬೆಳಗ್ಗೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಗುರುವಾರ ಬೆಳಗಿನಿಂದ ಸುರಿದ ಮಳೆಗೆ ಹಳ್ಳಕ್ಕೆ ಅಪಾರ ನೀರು ಬಂದಿದೆ. ಹಳ್ಳಕ್ಕೆ ಮೇಲ್ಸೇತುವೆ ಇಲ್ಲ. ನೆಲಮಟ್ಟದ ಸೇತುವೆ ಇತ್ತು. ನೀರಿನ ರಭಸ ಹೆಚ್ಚಾದ್ದರಿಂದ ವಾಹನ ಸಂಚಾರ ಬಂದ್ ಮಾಡಲಾಯಿತು. ನೀರಿನ ಹರಿವು ಇಳಿದಾಗ ವಾಹನಗಳು ಮತ್ತೆ ಸಂಚರಿಸಿದವು. ನೀರಿನ ರಭಸಕ್ಕೆ ಕಲ್ಲುಗಳು ಕಿತ್ತಿದ್ದು, ಸುಗಮ ವಾಹನ ಸಂಚಾರ ಕಷ್ಟವಾಗಿದೆ.

ಹಿರೇಹಳ್ಳ ತುಂಗಭದ್ರಾ ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನೀರಿನ ಹರಿವು ಹೆಚ್ಚಾದಾಗ ಸಂಚಾರ ಸಂಪೂರ್ಣ ಬಂದಾಗುತ್ತದೆ. ನೀರಿನ ಹರಿವು ಕಡಿಮೆಯಾಗುವವರೆಗೂ ಕಾಯುವ ಪರಿಸ್ಥಿತಿ ಇದೆ. ಇಲ್ಲವೇ ಸುತ್ತುವರೆದು ಸಂಚಾರ ಕೈಕೊಳ್ಳಬೇಕಾಗಿದೆ. ನಿಲೋಗಿಪುರ, ಹಲವಾಗಲಿ, ಕೆಸಲಾಪುರ ಗ್ರಾಮಗಳ ಜನರು ಇದೇ ರಸ್ತೆ ಮೂಲಕ ಅಳವಂಡಿಗೆ ವಾಣಿಜ್ಯ, ಆಸ್ಪತ್ರೆ ಮುಂತಾದ ಕಾರ್ಯಕ್ಕೆ ಬರುತ್ತಾರೆ. ಹಿರೇಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸಲು ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ ಕ್ರಮಗಳಾಗಿಲ್ಲ. ಕೂಡಲೇ ಹಳ್ಳಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದು ನಿಲೋಗಿಪುರ ಗ್ರಾಮಸ್ಥರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net