

ಅಳವಂಡಿ: ದಾಂಪತ್ಯ ಜೀವನ ಅನ್ಯೋನ್ಯವಾಗಿ ನಡೆಯಬೇಕಾದರೆ ಪರಸ್ಪರ ಹೊಂದಾಣಿಕೆ, ಸಮಾಧಾನ ಅವಶ್ಯ. ಸಾಮೂಹಿಕ ಮದುವೆಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೆ ಬಡವರಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತವೆ ಎಂದು ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.
ತಿಗರಿ ಗ್ರಾಮದಲ್ಲಿ ಮೂರನೇ ವರ್ಷದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ವರೂ ಮಹರ್ಷಿ ವಾಲ್ಮೀಕಿ ಬೋಧಿಸಿದ ಆದರ್ಶ ತತ್ವಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಸಾಮೂಹಿಕ ಕಾರ್ಯದಿಂದ ಸರ್ವರಲ್ಲಿ ಒಗ್ಗಟ್ಟು, ಪ್ರಗತಿ ಸಾಧ್ಯ. ದಾಂಪತ್ಯ ಜೀವನವೆಂಬ ಬಂಡಿಯನ್ನು ಅನ್ಯೋನ್ಯವಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಪರಸ್ಪರ ಅರ್ಥ ಮಾಡಿಕೊಂಡು ಸಂಸಾರ ನಡೆಸಿಕೊಂಡು ಹೋಗಬೇಕು ಎಂದರು.
ಬಹದ್ದೂರ ಬಂಡಿಯ ಬಂಜಾರ ಧರ್ಮಗುರು ಗುರುಗೋಸಾಯಿ ಹೇಮಗಿರಿ ಭಾವಾ ಮಾತನಾಡಿ, ಧಾರ್ಮಿಕ ನಾಯಕರು, ಮಹರ್ಷಿಗಳು, ಪುಣ್ಯಪುರುಷರು, ಶರಣರು, ಸಂತರ ಸಭೆಗಳಲ್ಲಿ ಭಾಗವಹಿಸಬೇಕು. ಇವುಗಳಿಂದ ಮನಶ್ಯಾಂತಿ ದೊರೆಯಲಿದೆ ಎಂದರು.
ಬೆಳಗ್ಗೆ ದೇವಸ್ಥಾನದಲ್ಲಿ ವಾಲ್ಮೀಕಿ ಮಹರ್ಷಿ ಮೂರ್ತಿಗೆ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಹರಕೆ ಸಲ್ಲಿಸಿದರು. 10 ಜೋಡಿ ಸಾಮೂಹಿಕ ವಿವಾಹ ನೆರವೇರಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಭೀಮನಗೌಡ್ರ ಪೊಲೀಸ್ ಪಾಟೀಲ್, ನಿಂಗಪ್ಪ ಅಗಸಿಮನಿ, ಮುದಿಯಪ್ಪ ಅಡವಳ್ಳಿ, ಉಮೇಶ ತಿಗರಿ, ಮಾರುತಿ ಕಾತರಕಿ, ಗಂಗಪ್ಪ ಅಂಬಿಗೇರ, ಹನುಮಗೌಡ ಪೊಲೀಸಪಾಟೀಲ, ಸುಭಾಷ್ ಬರದೂರ, ವೀರೇಶ ಕುರಿ, ದೇವೇದ್ರ ಅಗಸಿಮನಿ, ವೀರಣ್ಣ ಪುಲೇಶಿ, ನಾಗೇಂದ್ರ ಕುಂಟಗೇರಿ, ಬೀರಪ್ಪ ಕುಂಟಗೇರಿ ಇತರರಿದ್ದರು.