

ಅಳವಂಡಿ: ಸಮೀಪದ ಕವಲೂರು ಗ್ರಾಮದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಕಲ್ಪವೃಕ್ಷ ಸಂಜೀವಿನಿ ಮಹಿಳಾ ಒಕ್ಕೂಟ ಮಂಗಳವಾರ ಕರೆ ನೀಡಿದ್ದ ಕವಲೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಪ್ರಮುಖ ಬೀದಿಗಳ ಮೂಲಕ ಬಸ್ ನಿಲ್ದಾಣದ ವರೆಗೆ ಸಾಗಿತು. ಅಲ್ಲಿ ದಿನವಿಡೀ ಧರಣಿ ನಡೆಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಂಘಟನೆಯ 1500ಕ್ಕೂ ಹೆಚ್ಚು ಮಹಿಳೆಯರು, ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷೆ ಗಂಗಮ್ಮ ಸಿಂದೋಗಿ ಮಾತನಾಡಿ, ದಶಕದಿಂದ ಗ್ರಾಮ ಹಾಗೂ ಸುತ್ತಮುತ್ತಲ ಹಳ್ಳಿಗೆ ಸಂಪರ್ಕ ಕಲ್ಪಿಸುವ ಕವಲೂರು-ಬನ್ನಿಕೊಪ್ಪ, ಕವಲೂರು-ಗುಡಗೇರಿ, ಕವಲೂರು-ಮುಂಡರಗಿ ವಾಯಾ ಘಟ್ಟಿರಡ್ಡಿಹಾಳ, ಮುರ್ಲಾಪುರ, ಅಳವಂಡಿ ಇತರ ರಸ್ತೆಗಳು ದುರಸ್ತಿ ಕಂಡಿಲ್ಲ. ಇದೇ ಕಾರಣಕ್ಕೆ ಬಸ್ ಸಂಚಾರ ಕೂಡ ಸ್ಥಗಿತಗೊಳ್ಳುತ್ತಿದ್ದು, ವಿದ್ಯಾರ್ಥಿಗಳು ನಡೆದುಕೊಂಡು ಶಾಲೆ, ಕಾಲೇಜಿಗೆ ಹೋಗುವ ಪರಸ್ಥಿತಿ ಇದೆ. ರಸ್ತೆ ದುರಸ್ತಿಗೆ ಅನೇಕ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮೊರೆ ಇಟ್ಟರೂ ಸ್ಪಂದಿಸಿಲ್ಲವೆಂದು ಆರೋಪಿಸಿದರು.
ಖಜಾಂಚಿ ರೇಣುಕಾ ಬೆಟಗೇರಿ ಮಾತನಾಡಿ, ರಸ್ತೆ ದುರಸ್ತಿ ಮಾಡುವುದಾಗಿ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಶಿಕ್ಷಣ, ಆಸ್ಪತ್ರೆಗೆ ತೆರಳುವ ರೋಗಿಗಳು, ಜಮೀನುಗಳಿಗೆ ಹೋಗುವ ರೈತರು ಹಾಗೂ ಸಾರಿಗೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ದೂರಿದರು.
ಕಾರ್ಯದರ್ಶಿ ಶೋಭಾ ಬೀಳಗಿ, ಸಹ ಕಾರ್ಯದರ್ಶಿ ಹುಸೇನಬೀ, ಖಜಾಂಚಿ ರೇಣುಕಾ ಬೆಟಗೇರಿ, ಸದಸ್ಯರಾದ ಶಮೀನಾಬಾನು, ಪ್ರಮುಖರಾದ ಶರಣಯ್ಯ, ಶರಣಪ್ಪ ಜಡಿ, ರಾಜೇಸಾಬ, ಸೈಯದ್‌ಪಾಷಾ, ಶಂಷುದ್ದೀನ್, ವಿದ್ಯಾರ್ಥಿಗಳು, ಯುವಕರು, ಗ್ರಾಮಸ್ಥರು, ಒಕ್ಕೂಟದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಧಾವಿಸದ ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಪಂ ಇಒ ದುಂಡೇಶ ತುರಾದಿ, ಶೀಘ್ರವೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಮಹಿಳೆಯರು, ಲಿಖಿತ ಹೇಳಿಕೆ ನೀಡುವವರೆಗೆ ಧರಣಿ ಮುಂದುವರಿಸುವುದಾಗಿ ಪಟ್ಟು ಹಿಡಿಹಿದರು. ಹೊರಡುತ್ತಿದ್ದ ತಹಸೀಲ್ದಾರ್ ಜೀಪ್ ತಡೆದರು. ಪೊಲೀಸರ ಮನವೊಲಿಕೆಗೂ ಬಗ್ಗದೆ ಜೀಪ್ ಮುಂದೆಯೇ ಧರಣಿ ಆರಂಭಿಸಿದ್ದರಿಂದ ಅಧಿಕಾರಿಗಳು ವಾಹನದಲ್ಲೇ ಕೂರುವಂತಾಯಿತು. ನಂತರ ಗ್ರಾಮದ ಮುಖಂಡರಾದ ಪ್ರದೀಪಗೌಡ ಮಾಲಿಪಾಟೀಲ, ಮಲ್ಲಣ್ಣ ಶಿಳ್ಳಿನ ಮಾತನಾಡಿ, ಎರಡು ತಿಂಗಳೊಳಗೆ ರಸ್ತೆ ದುರಸ್ತಿ ಮಾಡದಿದ್ದರೆ ಹೋಬಳಿ ಕೇಂದ್ರದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿ ಧರಣಿ ಹಿಂಪಡೆಯಲಾಯಿತು. ಸಿಪಿಐ ಸುರೇಶ ಡಿ, ಪಿಎಸ್‌ಐ ಪ್ರಹ್ಲಾದ ನಾಯಕ, ಆರ್‌ಐ ಸುರೇಶ, ಪಿಡಿಒ ಸುರೇಶ, ಕಾರ್ಯದರ್ಶಿ ಸಣ್ಣಜಂಬಣ್ಣ, ಎಇ ನೇತ್ರಾವತಿ, ಎಎಸ್‌ಐ ಖಾದರ್, ಶಶಿಕಾಂತ ರಾಠೋಡ್ ಇದ್ದರು.
ಸದ್ಯ ಬನ್ನಿಕೊಪ್ಪ ರಸ್ತೆ ದುರಸ್ತಿ ಕಾರ್ಯ ಪ್ರಾರಂಭಿಸಲಾಗುವದು. ಮುರ್ಲಾಪುರ, ಗುಡಗೇರಿ ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂದ್ರಾಳ ಮಾರ್ಗದ ಸೇತುವೆ, ಇತರ ರಸ್ತೆಗಳ ದುರಸ್ತಿ ಮಾಡಲಾಗುವುದು.| ವೆಂಕಟೇಶ ಪಿಡ್ಲುೃಡಿ ಎಇಇ