

ಅಳವಂಡಿ: ವಿದ್ಯಾರ್ಥಿಗಳು ದೈಹಿಕ ಶಕ್ತಿ ಜತೆ ಜ್ಞಾನವನ್ನು ಸಂಪಾದಿಸಿ ಬೌದ್ಧಿಕ ಮೌಲ್ಯ ಕಂಡುಕೊಳ್ಳಬೇಕು ಎಂದು ಸಾಹಿತಿ ಆರ್.ಎಲ್.ಪೊಲೀಸ್‌ಪಾಟೀಲ್ ಹೇಳಿದರು.
ಗ್ರಾಮದ ಶ್ರೀ ಶಿವಮೂರ್ತಿಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಪುಸ್ತಕವನ್ನು ಪ್ರೀತಿಸಿದರೆ ಜೀವನಕ್ಕೆ ಹಾದಿ ತೋರಿಸುತ್ತವೆ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು ಬೌದ್ಧಿಕ ಶಕ್ತಿ ಹೆಚ್ಚಿಸಿಕೊಳ್ಳಿ. ದೇಹ ಸದೃಢತೆಗೆ ಇಂದ್ರೀಯಗಳನ್ನು ಗಟ್ಟಿಗೊಳಿಸಬೇಕು. ಜ್ಞಾನ, ಯೋಗ, ಮಾನಸಿಕ ಶಕ್ತಿ ಹಾಗೂ ಏಕಾಗ್ರತೆಯಿಂದ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು.
ಮುಂಡರಗಿಯ ಕಸಾಪ ತಾಲೂಕಾಧ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿದಾಯಕ ವಿಷಯದಲ್ಲಿ ತೊಡಗಿಸಿಕೊಂಡು ಸಾಧನೆಗೆ ಮುಂದಾಗಬೇಕು. ಜೀವನದಲ್ಲಿ ಧನಾತ್ಮಕ ಚಿಂತನೆ ಅಳವಡಿಸಿಕೊಂಡರೆ ಸ್ಪಷ್ಟ ಗುರಿ ತಲುಪಲು ಸಾಧ್ಯ. ನಿರಂತರ ಪ್ರಯತ್ನ, ಶಿಸ್ತು, ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ. ದಾರಿದ್ರವೇ ನಿಜವಾದ ವೈರಿ, ನಿರಾಶವಾದದ ಜೀವನ ಬೇಡ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ನಾಗರಾಜ ಹಾವಿನಾಳ, ಸಿಡಿಸಿ ಸದಸ್ಯರಾದ ಬಸವರಡ್ಡೆಪ್ಪ ಹಳ್ಳಿಕೇರಿ, ಅರವಿಂದಪ್ಪ ಬಿರಾದಾರ, ಹನುಮಂತ ಕರಡಿ, ನಜರುದ್ದೀನ ಬಿಸರಳ್ಳಿ, ಹನುಮಂತಪ್ಪ ಜಾಣಗಾರ, ಸಾಗರ ಉಪ್ಪಾರ, ಸಂಚಾಲಕರಾದ ಜಗದೀಶ ಆಲದಕಟ್ಟಿ, ಮಹೇಶಕುಮಾರ, ಶಂಕ್ರಪ್ಪ, ಪ್ರವೀಣ ಕುಮಾರ, ಡಾ,ಹಂಪಾದೇವಿ, ಸಾಲಿಯಾ ಬೇಗಂ, ರೇಷ್ಮಾ, ಶಿಕ್ಷಣ ಪ್ರೇಮಿ ಬಸವರಡ್ಡೆಪ್ಪ ಹಳ್ಳಿಕೇರಿ ಇತರರಿದ್ದರು.