

ಅಳವಂಡಿ: ಸರ್ಕಾರಿ ನೌಕರರು ಕರ್ತವ್ಯ ಸಮಯದಲ್ಲೇ ಸರಿಯಾಗಿ ಕೆಲಸ ಮಾಡಲ್ಲ. ಆದರೆ, ಕವಲೂರು ವಲಯದ ಅಂಗನವಾಡಿ ಮೇಲ್ವಿಚಾರಕಿ ಪ್ರೀತಿ ಕೋರೆ ರಜೆ ದಿನಗಳಲ್ಲೂ ಅಲೆಮಾರಿ ಮಕ್ಕಳಿಗೆ ಆಟ-ಪಾಠ ಕಲಿಸಿ ಮುಖ್ಯವಾಹಿನಿಗೆ ತರಲು ಮುಂದಾಗುವ ಮೂಲಕ ಮಾದರಿಯಾಗಿದ್ದಾರೆ.
ಹೊಟ್ಟೆಹೊರೆಯಲು ಊರಿಂದ ಊರಿಗೆ ಕೆಲಸಕ್ಕಾಗಿ ಅಲೆದಾಡುವ ಅಲೆಮಾರಿ ಕುಟುಂಬಗಳಿರುವ ಗುಡಿಸಲುಗಳಿಗೆ ತೆರಳುವ ಕೊಪ್ಪಳದ ಪ್ರೀತಿ ಕೋರೆ, ಮಹಿಳೆಯರು, ಮಕ್ಕಳಿಗೆ ಅಕ್ಷರ ಜ್ಞಾನದ ಜತೆ ವಿವಿಧ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಾರೆ. ಅಲ್ಲದೆ ಮಕ್ಕಳನ್ನು ಸಮೀಪದ ಅಂಗನವಾಡಿಗೆ ಸೇರಿಸುವಲ್ಲೂ ಯಶಸ್ವಿಯಾಗಿದ್ದಾರೆ. ರಜೆ ದಿನಗಳಲ್ಲಿ ಕೆಲ ಸಮಯ ಅಲ್ಲಿಯೇ ಕಳೆದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಗರ್ಭಿಣಿಯರು, ಬಾಣಂತಿಯರಿಗೆ ಸರ್ಕಾರದ ಯೋಜನೆ ಮಾತೃಪೂರ್ಣ ಹಾಗೂ ಇತರ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದರ ಜತೆ ಅಂಗನವಾಡಿಗಳಿಂದ ಒದಗಿಸಿಕೊಡುತ್ತಾರೆ. ಕಿಶೋರಿಯರಿಗೆ ಸೂಕ್ತ ಸಲಹೆ, ಶುಚಿತ್ವ, ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಕವಲೂರು ವಲಯದ ನಿಲೋಗಿಪುರ, ಹೈದರನಗರ ಗ್ರಾಮಗಳ ಹೊರವಲಯದಲ್ಲಿ ವಾಸಿಸುತ್ತಿರುವ ಕಬ್ಬು ಕಟಾವು ಮಾಡುವ ಅಲೆಮಾರಿ ಕುಟುಂಬಗಳಲ್ಲಿ ಜ್ಞಾನದ ಬೆಳಕು ಹಚ್ಚುತ್ತಿರುವ ಪ್ರೀತಿ ಕೋರೆ ಎಂಎಸ್‌ಡಬ್ಲುೃ ಮುಗಿಸಿದ್ದಾರೆ. ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವಲಯದ ವ್ಯಾಪ್ತಿಯ ನಿಲೋಗಿಪುರ, ಹೈದರನಗರ ಗ್ರಾಮದ ಹೊರವಲಯದಲ್ಲಿ ವಾಸವಿರುವ ಅಲೆಮಾರಿ ಕುಟುಂಬಗಳಿಗೆ ಶಿಕ್ಷಣದ ಮಹತ್ವ ತಿಳಿಸಿ, ಅವರ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದ್ದೇನೆ. ಪಕ್ಕದ ಅಂಗನವಾಡಿಗೆ ಸೇರಿಸುವ ಕೆಲಸವೂ ಮಾಡಿದ್ದೇನೆ. ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರಿಗೆ ಶುಚಿತ್ವ, ಸರ್ಕಾರದ ಸೌಲಭ್ಯಗಳ ಕುರಿತು ಅರಿವು ಮೂಡಿಸುತ್ತಿದ್ದೇನೆ.| ಪ್ರೀತಿ ಕೋರೆ ಅಂಗನವಾಡಿ ಮೇಲ್ವಿಚಾರಕಿ, ಕವಲೂರು ಪ್ರತಿ ವರ್ಷ ಐದಾರು ತಿಂಗಳು ರೈತರ ಜಮೀನುಗಳಲ್ಲಿ ಕಬ್ಬು ಕಟಾವು ಮಾಡುತ್ತೇವೆ. ಸದ್ಯ ಹೈದರನಗರ ರೈತರ ಜಮೀನಿನಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದೇವೆ. ಪ್ರತಿ ಭಾನುವಾರ ಅಂಗನವಾಡಿ ಮೇಲ್ವಿಚಾರಕಿ ಪ್ರೀತಿ ಮೇಡಂ ಬಂದು ನಮ್ಮ ಮಕ್ಕಳಿಗೆ ಅಕ್ಷರಭ್ಯಾಸ ಹಾಗೂ ಆರೋಗ್ಯ, ಸ್ವಚ್ಛತೆ ಬಗ್ಗೆ ತಿಳಿಸುತ್ತಿದ್ದಾರೆ.| ರಾಮಪ್ಪ ನಾಯಕ್ ಕಬ್ಬು ಕಟಾವಿಗೆ ಬಂದಿರುವ ಕಾರ್ಮಿಕ
ಅಲೆಮಾರಿ ಸಮುದಾಯದವರಿಗೆ ಸೌಲಭ್ಯ ತಲುಪಿಸಿ: ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚನೆ
ಕೊಪ್ಪಳ: ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರ ಏಳಿಗೆಗೆ ವಿವಿಧ ಇಲಾಖೆಯಲ್ಲಿರುವ ಯೋಜನೆಗಳನ್ನು ಪಟ್ಟಿ ಮಾಡಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರಿಗೆ ಸರ್ಕಾರದ ಅಭಿವೃದ್ಧಿ ನಿಗಮ, ವಿವಿಧ ಇಲಾಖೆಗಳಲ್ಲಿರುವ ವಸತಿ, ಮೂಲಸೌಲಭ್ಯ, ನಿವೇಶನ ಹಂಚಿಕೆ, ಶಿಷ್ಯ ವೇತನ, ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ಸೇರಿ ಇತರ ಸೌಕರ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಅರ್ಹರ ಆಯ್ಕೆ ಮೂಲಕ ಈಗಾಗಲೇ ವಿವಿಧ ತಾಲೂಕುಗಳಲ್ಲಿ ನಿವೇಶನ ಹಂಚಿಕೆಗಾಗಿ ಗುರುತಿಸಿದ ಸ್ಥಳಗಳನ್ನು ನಿಯಮಾನುಸಾರ ವಿತರಿಸಬೇಕು. ವಸತಿ ಯೋಜನೆಗಳಲ್ಲಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳ ಆಯ್ಕೆ ಮಾಡಬೇಕು. ಅದರಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮೂಲಕ ಅಲೆಮಾರಿ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಸತಿ ಶಾಲೆಗಳ ಸೌಲಭ್ಯ ಕಲ್ಪಿಸಬೇಕು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಎಂ.ದೊಡ್ಡಮನಿ ಮಾತನಾಡಿ, ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಅಲೆಮಾರಿ, ಅರೆ ಅಲೆಮಾರಿ ಮಕ್ಕಳಿಗಾಗಿ ರಿಂದ 5ನೇ ತರಗತಿವರೆಗೆ ಆಶ್ರಮ ಶಾಲೆ ನಡೆಸಲಾಗುತ್ತಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ನಿವೇಶನ ರಹಿತ ಕುಟುಂಬದವರಿಗೆ ಯಲಬುರ್ಗಾ ತಾಲೂಕಿನಲ್ಲಿ 3 ಎಕರೆ, ಕುಷ್ಟಗಿ ತಾಲೂಕಿನಲ್ಲಿ 4 ಎಕರೆ ಜಮೀನು ಖರೀದಿಸಿದ್ದು, ನಿವೇಶನ ಹಂಚಿಕೆ ಪ್ರಕ್ರಿಯೆ ಬಾಕಿ ಇದೆ. ವಸತಿ ರಹಿತ ಕುಟುಂಬಗಳಿಗಾಗಿ ವಸತಿ ಯೋಜನೆಯಡಿ ಮನೆಗಳ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಮಿತಿ ಸಭೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಡಿಎಚ್‌ಒ ಡಾ.ಅಲಕಾನಂದ ಮಳಗಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ನಾಗರಾಜ ಎಚ್., ವಯಸ್ಕರ ಶಿಕ್ಷಣ ಇಲಾಖೆಯ ಉಮಾದೇವಿ ಸೊನ್ನದ ಇತರರಿದ್ದರು.