

ಅಳವಂಡಿ: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಅತ್ಯವಶ್ಯ ಎಂದು ತಹಸೀಲ್ದಾರ್ ವಿಠಲ ಚೌಗಲಾ ಹೇಳಿದರು.
ಸಮೀಪದ ಹಿರೇಸಿಂದೋಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎನ್‌ಡಿಆರ್‌ಎಫ್ ಮತ್ತು ಕೊಪ್ಪಳ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಕಲ್ಪಿತ ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಪ್ರವಾಹ, ಅಗ್ನಿ ಅವಘಡ, ಗ್ಯಾಸ್ ಸಿಲಿಂಡರ್ ಸ್ಫೋಟ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಮತ್ತು ಅಕ್ಕ- ಪಕ್ಕದವರಿಗೂ ತಿಳಿಸಬೇಕೆಂದು ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಇನ್‌ಸ್ಪೆಕ್ಟರ್ ಅಜಯ ಕುಮಾರ್ ಮಾತನಾಡಿ, ಪ್ರಕೃತಿ ವಿಕೋಪಗಳಾದ ಭೂಕಂಪ, ಸುನಾಮಿ, ಚಂಡಮಾರುತ, ಪ್ರವಾಹ ಹಾಗೂ ಮಾನವ ನಿರ್ಮಿತ ವಿಕೋಪ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸಿದರೆ ಸಾವಿರಾರು ಜನರ ಜೀವ ಉಳಿಸಬಹುದು ಎಂದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಹೆಡ್ ಕಾನ್‌ಸ್ಟೇಬಲ್ ಶಂಕ್ರಪ್ಪ ದೂಪದಾಳ ಹಾಗೂ ಕಾನ್‌ಸ್ಟೇಬಲ್ ವಜ್ರ ಚೇತನ ಅವರು ಅಪಘಾತ, ಹೃದಯಾಘಾತ, ಭೂಕಂಪ, ಗುಡುಗು ಮತ್ತು ಸಿಡಿಲು, ಪ್ರವಾಹ, ಅಗ್ನಿ ಅವಘಡ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕಲ್ಪಿತ ಪ್ರದರ್ಶನ ನೀಡಿದರು.
ತಾಪಂ ಇಒ ದುಂಡಪ್ಪ ತುರಾದಿ, ಹಿರೇಸಿಂದೋಗಿ ಗ್ರಾಪಂ ಅಧ್ಯಕ್ಷ ರುದ್ರಮುನಿ ಮಠದ, ಅಗ್ನಿಶಾಮಕ ಇಲಾಖೆ ಅಧಿಕಾರಿ ನರಸಪ್ಪ, ಅಳವಂಡಿ ಠಾಣೆಯ ಪಿಎಸ್‌ಐ ಪ್ರಹ್ಲಾದ ನಾಯಕ, ಕೆಪಿಎಸ್ ಮುಖ್ಯಶಿಕ್ಷಕ ಮಲ್ಲಪ್ಪ, ಎಸ್‌ಡಿಎಂಸಿ ಸದಸ್ಯರು, ವಿವಿಧ ಶಾಲೆ-ಕಾಲೇಜುಗಳ ಮಕ್ಕಳು ಮತ್ತು ಹಿರೇಸಿಂದೋಗಿ ಗ್ರಾಮಸ್ಥರು ಉಪಸ್ಥಿತರಿದ್ದರು.