ಭಕ್ತಿಯ ಮಾಣಿಕ್ಯ ಮಹಾಸಾಧ್ವಿ ಮಲ್ಲಮ್ಮ

Alavandi Hemareddy mallamma jayanti
ಅಳವಂಡಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ನಡೆದ ಭಾವಚಿತ್ರ ಮೆರವಣಿಗೆಗೆ ಮರುಳಾರಾಧ್ಯ ಶಿವಾಚಾರ್ಯರು ಚಾಲನೆ ನೀಡಿದರು. ಪ್ರಮುಖರಾದ ಸುರೇಶ, ಬಸವರಾಜ, ಸಿದ್ದಲಿಂಗ ಸ್ವಾಮಿ, ವೆಂಕಣ್ಣ ಇತರರಿದ್ದರು.
Published on

ಅಳವಂಡಿ: ಹೇಮರಡ್ಡಿ ಮಲ್ಲಮ್ಮ ಜೀವನದಲ್ಲಿ ಕೌಟುಂಬಿಕ ಸಂಕಷ್ಟಗಳ ನಡುವೆ ತಾಳ್ಮೆಯಿಂದ ಆಧ್ಯಾತ್ಮಿಕ ಸಾಧನೆ ಮಾಡಿದರು ಎಂದು ಮರುಳಾರಾಧ್ಯ ಶಿವಾಚಾರ್ಯ ತಿಳಿಸಿದರು.

ಗ್ರಾಮದಲ್ಲಿ ರಡ್ಡಿ ಮಲ್ಲಮ್ಮ ಸಮಾಜ ಹಾಗೂ ಗ್ರಾಮಸ್ಥರಿಂದ ಭಾನುವಾರ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ 603ನೇ ಜಯಂತಿ ಅಂಗವಾಗಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಕಾಯಕದಲ್ಲಿ ದೇವರ ಕಂಡ ಹೇಮರಡ್ಡಿ ಮಲ್ಲಮ್ಮ ಮನುಕುಲದ ಸ್ತ್ರೀಕುಲ ರತ್ನ ಎಂದರು.

ಮಲ್ಲಮ್ಮ ಅವರಿಗೆ ಮನೆಯಲ್ಲಿ ಗಂಡ, ಅತ್ತೆ-ಮಾವ, ನಾದಿನಿ ಸಹಿತ ತೊಂದರೆ ಕೊಡುತ್ತಿದ್ದರೂ ಸಹಿಸಿಕೊಂಡು ಕುಟುಂಬವನ್ನು ತ್ಯಜಿಸದೇ, ಸಂಸಾರವೇ ದೈವಸ್ವರೂಪ ಎಂದು ಜಗತ್ತಿಗೆ ಸಾರಿದಳು. ಅವರು ಓದದಿದ್ದರೂ, ವಚನಗಳನ್ನು ರಚಿಸದಿದ್ದರೂ ಮೈದುನ ವೇಮನನ್ನು ಸರಿದಾರಿಗೆ ತಂದು ಕವಿ, ತತ್ವಜ್ಞಾನಿಯನ್ನಾಗಿಸಿದರು. ಬೇಡಿ ಬಂದವರಿಗೆ ಕೊಡುಗೈ ದಾನಿಯಾಗಿದ್ದರು. ಕಾಯಕ ಜೀವನದಿಂದ ಮಾತ್ರ ನೆಮ್ಮದಿ, ಶಾಂತಿ ಸಿಗಲಿದೆ. ಎಲ್ಲರ ಒಳಿತನ್ನು ಬಯಸುವ ಭಕ್ತಿಯ ಮಾಣಿಕ್ಯ ಮಲ್ಲಮ್ಮ ತಾಯಿ ಎಂದರು.

ಮೆರವಣಿಗೆ: ಜಯಂತಿ ಅಂಗವಾಗಿ ಬೆಳಗ್ಗೆ ಅಲಂಕೃತಗೊಂಡ ತೆರೆದ ವಾಹನದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಭಾವಚಿತ್ರವನ್ನು ಗ್ರಾಮದ ಬನ್ನಿಕಟ್ಟಿಯಿಂದ ಮಹಿಳೆಯರ ಕಳಸ, ಕುಂಭ, ಸಾಂಸ್ಕೃತಿಕ ತಂಡಗಳು ಹಾಗೂ ವಾದ್ಯ ಮೇಳದೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಶ್ರೀ ಮಾರುತೇಶ್ವರ ದೇವಸ್ಥಾನಕ್ಕೆ ತಲುಪಿತು. ನಂತರ ಅನ್ನ ದಾಸೋಹ ಸೇವೆ ನಡೆಯಿತು. ಪ್ರಮುಖರಾದ ಸುರೇಶ ಭೂಮರಡ್ಡಿ, ಕೇಶವರಡ್ಡಿ, ಬಸವರಾಜ ಮೇಟಿ, ವಿದ್ಯಾದರ, ಷಣ್ಮುಖ ರಡ್ಡಿ, ಪ್ರಭು, ಭರಮಪ್ಪ, ಭೀಮಣ್ಣ, ರವೀಂದ್ರ, ಬಸವರಡ್ದೆಪ್ಪ, ನಂದೀಶ, ತೋಟಪ್ಪ, ಪ್ರಕಾಶ, ಶರಣಪ್ಪ ಗೌಡ, ಹನುಮಂತಗೌಡ, ಪ್ರಭು, ಬಸವರಡ್ಡಿ, ನಂದೀಶ್, ಸಿದ್ದಲಿಂಗ ಸ್ವಾಮಿ, ವೆಂಕಣ್ಣ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net