

ಅಳವಂಡಿ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಅಣಿಗೆಗೆ ಕಲಿಕಾ ಹಬ್ಬ ಸಹಕಾರಿಯಾಗಿದೆ. ಸರ್ಕಾರ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಶಿಕ್ಷಣ ಸಂಯೋಜಕ ಮಹಾದೇವಪ್ಪ ಗುಳೇದ ಹೇಳಿದರು.
ಸಮೀಪದ ಹಲವಾಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಅಳವಂಡಿ ಕ್ಲಸ್ಟರ್‌ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಲಿಕಾ ಹಬ್ಬಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಓದಿನ ಜತೆಗೆ ಸಹ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಪ್ರತಿಭಾ ಕಾರಂಜಿ, ಕ್ರೀಡಾ ಸ್ಫೂರ್ತಿ ಕಂಡುಕೊಳ್ಳಲು ಕ್ರೀಡಾ ಸ್ಪರ್ಧೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲು ಕಲಿಕಾ ಹಬ್ಬವನ್ನು ಆಯೋಜಿಸುತ್ತಿದೆ. ಒಟ್ಟಾರೆಯಾಗಿ ಮಕ್ಕಳಲ್ಲಿನ ವಿಭಿನ್ನ ಪ್ರತಿಭೆಯನ್ನು ಹೊರತರಲು ಹಬ್ಬಗಳು ಸಹಕಾರಿಯಾಗಿವೆ ಎಂದರು.
ಅಳವಂಡಿ ವಲಯದ ಬಿಆಯ್‌ಇಆರ್‌ಟಿ ಲಕ್ಷಣ ಪಲ್ಲೇದ ಮಾತನಾಡಿ, ಮಕ್ಕಳ ಓದಿಗೆ ಉತ್ತೇಜನ, ಪ್ರೋತ್ಸಾಹ ಹಾಗೂ ಹುಮ್ಮಸ್ಸನ್ನು ನೀಡಲು ಕಲಿಕಾ ಹಬ್ಬ ಪ್ರಯೋಜನಕಾರಿಯಾಗಿದೆ. ಶಾಲೆಯ ಅಭಿವೃದ್ದಿಯಲ್ಲಿ ಸರ್ಕಾರದ ಯೋಜನೆಯ ಜತೆಗೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಎಲ್ಲರೂ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದಾಗ ಮಕ್ಕಳ ಓದಿಗೆ ಪ್ರೋತ್ಸಾಹ ಸಿಗಲಿದೆ ಎಂದರು.
ಬಿಆರ್‌ಪಿ ಹನುಮರಡ್ಡಿ ಮಾತನಾಡಿ, ಮಕ್ಕಳ ವಿಚಾರ ಶಕ್ತಿ, ಜ್ಞಾನದ ಹರಿವು ಹೆಚ್ಚಳಕ್ಕೆ ಕಲಿಕಾ ಹಬ್ಬಗಳು ಸಹಕಾರಿಯಾಗಲಿವೆ. ಕಲಿಕೆಯಲ್ಲಿ ಒಳ್ಳೆಯದನ್ನು ನೀಡುವುದೇ ಶಿಕ್ಷಣ. ಅಭಿರುಚಿ, ಅವಿಷ್ಕಾರ, ಪತ್ತೆ ಹಚ್ಚುವುದು ಶಿಕ್ಷಣದ ಉದ್ದೇಶ ಎಂದರು.
ಎಸ್‌ಡಿಎಮ್‌ಸಿ ಅಧ್ಯಕ್ಷ ಶರಣಪ್ಪ ಬೆಂಚಮೇಟಿ, ಸಿಆರ್‌ಪಿ ವಿಜಯಕುಮಾರ ಟಿಕಾರೆ, ಮುಖ್ಯ ಶಿಕ್ಷಕ ವೆಂಕರಡ್ಡಿ ಇಮ್ಮಡಿ, ಬಿಆಯ್‌ಇಆರ್‌ಟಿ ಶಿಕ್ಷಕ ಬಸನಗೌಡ, ಪ್ರಮುಖರಾದ ಸಿದ್ದಣ್ಣ ಹಳ್ಳಿ, ಬಸಮ್ಮ ಹಳ್ಳಿ, ಸಾವಿತ್ರಿ, ಚನ್ನಪ್ಪ ಕೊಂಡೇನಹಳ್ಳಿ, ಸಾರೆಪ್ಪ ಪೂಜಾರ, ರಾಮಣ್ಣ ಮಲ್ಲಿಕೇರಿ, ರವಿ ನಾಯಕ, ಸಿದ್ದಣ್ಣ ಹಾಗೂ ಕ್ಲಸ್ಟರ್ ಮಟ್ಟದ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಮಕ್ಕಳು ಇತರರಿದ್ದರು.