

ಅಳವಂಡಿ: ದೇಶಕ್ಕೆ ಅನ್ನ ನೀಡುವ ರೈತರ ಮಕ್ಕಳಿಗೆ ಕನ್ಯಾದಾನ ಮಾಡಿ ಎಂದು ಹಡಗಲಿಯ ಶ್ರೀ ಹಿರೇಶಾಂತವೀರ ಸ್ವಾಮೀಜಿ ಹೇಳಿದರು.
ಸಮೀಪದ ಕವಲೂರು ಗ್ರಾಮದಲ್ಲಿ ಭಜನಾ ಮಂಗಲದ ಅಂಗವಾಗಿ ನಡೆದ ಧಾರ್ಮಿಕ ಸಭೆ, ತುಲಾಭಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಗುರುವಾರ ಮಾತನಾಡಿದರು. ಹಿಂದಿನಿಂದ ಬಂದ ಸಂಸ್ಕಾರ, ಸಂಪ್ರದಾಯಗಳನ್ನು ಬಿಡಬಾರದು. ಮಹಾತ್ಮರ, ಸಾಧಕರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಮಾತನಾಡಿ, ಭಕ್ತರು ನೀಡುವ ತುಲಾಭಾರದ ಹಣ ಆಶ್ರಮದ ಅಂಧ, ಅನಾಥ, ದೀನ-ದಲಿತರ ದಾಸೋಹಕ್ಕೆ ಸಲ್ಲಿಕೆಯಾಗುತ್ತಿದೆ. ಭಜನೆ ಅಂದರೆ ನಾದದ ಮೂಲಕ ಶಿವನ ಸ್ಮರಣೆ ಮಾಡುವುದಾಗಿದೆ. ವರ್ಷದಾದ್ಯಂತ ದುಡಿವ ಜನರ ಮನಸ್ಸಿಗೆ ಶಿವ ನಾಮಸ್ಮರಣೆಯಿಂದ ಶಾಂತಿ ಸಿಗಲಿದೆ. ಮೊಬೈಲ್ ಎಂಬ ಭೂತ ಯುವಕರ ಜೀವನ ಹಾಳು ಮಾಡುತ್ತಿದೆ. ಇದೊಂದು ದುಶ್ಚಟವಾಗಿದ್ದು, ಅವಶ್ಯಕತೆಗೆ ತಕ್ಕಂತೆ ಬಳಸಬೇಕು ಸಲಹೆ ನೀಡಿದರು.
ನಂತರ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಬಸವರಾಜ, ಸಾವಿತ್ರಿ, ಸಿದ್ದನಗೌಡ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಂತರ ಮಹಾ ದಾಸೋಹ ನಡೆಯಿತು.
ಗುಲಬುರ್ಗಾದ ಶ್ರೀ ಬಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಬಿ.ಕೆ. ಶಾಂತಕ್ಕ, ಶ್ರೀ ಸಿದ್ದೇಶ್ವರ ಸ್ವಾಮೀಜಿ, ಬಸವರಾಜ, ಸಾವಿತ್ರಿ, ಸಿದ್ದನಗೌಡ, ಗ್ರಾಮಸ್ಥರು ಹಾಗೂ ಯುವಕ ಸಂಘದ ಸದಸ್ಯರು ಇದ್ದರು.