

ಅಳವಂಡಿ: ಸಮೀಪದ ಹಟ್ಟಿ ಗ್ರಾಮದಲ್ಲಿ ಶ್ರೀ ದುರ್ಗಾಂಬೆ ಹಾಗೂ ಲಕ್ಕಾಂಬೆ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಶ್ರೀದೇವಿಯರ ಗಂಗಾದರ್ಶನ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ಶ್ರೀಮಾತೆಯರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಡ್ಡಪಲ್ಲಕ್ಕಿ ಮೆರವಣಿಗೆಯೊಂದಿಗೆ ಗಂಗಾದರ್ಶನ ಕಾರ್ಯಕ್ರಮ ನಡೆಯಿತು. ಡೊಳ್ಳು, ಭಜನೆ ಇತರ ಮಂಗಳ ವಾದ್ಯಗಳು ಮೆರವಣಿಗೆಗೆ ಮೆರಗು ನೀಡಿದವು. ನೂರಾರು ಭಕ್ತರು ದೀಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು. ಉತ್ಸವ ದೇವಸ್ಥಾನ ತಲುಪಿದ ಬಳಿಕ ದೇವರಿಗೆ ಕಾಯಿ, ಕರ್ಪೂರ, ನೈವೇದ್ಯ ಸಲ್ಲಿಸಿ ಭಕ್ತಿ ಮೆರೆದರು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಗದಗ, ಬಳ್ಳಾರಿ, ಹಾವೇರಿ, ರಾಯಚೂರು, ಬಾಗಲಕೋಟೆ ಇತರ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.