ಮನುಷ್ಯನ ದುರಾಸೆಯಿಂದ ಪಕೃತಿ ಸಂಪತ್ತು ಮಲಿನ

Published on

ಅಳವಂಡಿ: ಮನುಷ್ಯನಿಗೆ ಭೂಮಿ, ಆಕಾಶ, ಗಾಳಿ, ನೀರು, ಬೆಳಕು ಅತ್ಯಮೂಲ್ಯ ಸಂಪತ್ತುಗಳಾಗಿವೆ. ಇವುಗಳನ್ನು ಸಂರಕ್ಷಿಸುವ ಕೆಲಸ ಆಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರಕಾಶರಾವ್ ಹೇಳಿದರು.

ಸಮೀಪದ ಬೆಟಗೇರಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಬೆಟಗೇರಿ ಗ್ರಾಪಂ, ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರಿಂದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ಪ್ರಾಕೃತಿಕ ಸಂಪತ್ತುಗಳು ಮನುಷ್ಯನ ದುರಾಸೆಯಿಂದ ಮಲಿನವಾಗುತ್ತಿವೆ. ಇದರಿಂದಾಗಿ ದೇವರು ಉಚಿತವಾಗಿ ನೀಡಿದ ಮೂಲ ಸೌಕರ್ಯಗಳನ್ನು ಈಗ ದುಡ್ಡು ಕೊಟ್ಟು ಪಡೆಯುವಂತಾಗಿದೆ. ಇವುಗಳ ಶುದ್ಧೀಕರಣವಾಗಬೇಕಾದರೆ ಜೀವನ ಶೈಲಿ ಬದಲಿಸಬೇಕಿದೆ. ಅಲ್ಲದೆ ಎಲ್ಲರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಯೋಜನಾಧಿಕಾರಿ ಜಗದೀಶ.ಕೆ.ಎಚ್. ಮಾತನಾಡಿ, ಆರೋಗ್ಯವಂತರಾಗಿರಲು ಪರಿಸರ ಶುದ್ಧವಾಗಿರಬೇಕು. ವಾಯು ಹಾಗೂ ಜಲ ಮಾಲಿನ್ಯ ತಡೆಯಬೇಕು. ಮಳೆಗಾಲದಲ್ಲಿ ನೀರು ನಿಲ್ಲಿಸುವ ಕೆಲಸ ಮಾಡಬೇಕು. ಗ್ರಾಮದ ಕೆರೆಯನ್ನು ಧರ್ಮಸ್ಥಳ ಸಂಸ್ಥೆಯಿಂದ 8 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಕಾರ ಅವಶ್ಯ ಎಂದರು.

ನಂತರ ಕುಂಭಗಳ ಪೂಜೆ, ಗಂಗಾಪೂಜೆ ಕಾರ್ಯಕ್ರಮ ನಡೆಯಿತು. ಇಂಜಿನಿಯರ್ ಸತೀಶ, ಗ್ರಾಪಂ ಅಧ್ಯಕ್ಷ ದುರಗಪ್ಪ, ಮಾಜಿ ತಾಪಂ ಸದಸ್ಯ ವೀರೇಶ ಸಜ್ಜನ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಂದಾನಯ್ಯ, ಪಿಎಸಿಎಸ್ ಅಧ್ಯಕ್ಷ ಯಂಕಣ್ಣ, ಪ್ರಮುಖರಾದ ಏಳುಕೋಟೇಶ ಕೋಮಲಾಪುರ, ಶಂಕರಪ್ಪ ಬಡಿಗೇರ, ನಾರಾಯಣಪ್ಪ ಮತ್ತೂರು, ದೇವಪ್ಪ ಮಾಳೆಕೊಪ್ಪ, ಬಸವರಾಜ ನಾಗರಡ್ಡಿ, ಗವಿಸಿದ್ದಪ್ಪ ಸಂಗಟಿ, ಅಶೋಕ, ಲಿಂಗರಾಜ, ನಾರಾಯಣಪ್ಪ ಗುಡ್ಲಾನೂರ, ಬಸವರಾಜ ಯತ್ನಳ್ಳಿ, ವಿಶ್ವ, ಉಮೇಶ ಕಡಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net