

ಅಳವಂಡಿ: ಹಲವಾಗಲಿ, ಕೇಸಲಾಪುರ, ಹೈದರನಗರ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟ ಕಾರಣ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಗುರುವಾರ ಹಲವಾಗಲಿ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಈ ಗ್ರಾಮಗಳ ಬಹುತೇಕ ಮಕ್ಕಳು ವಿದ್ಯಾಭ್ಯಾಸಕ್ಕೆ ಹಾಗೂ ಸಾರ್ವಜನಿಕರು ವ್ಯಾಪಾರ ವಹಿವಾಟು, ಆಸ್ಪತ್ರೆ ಸೇರಿ ಇತರ ಕೆಲಸಗಳಿಗೆ ಮುಂಡರಗಿ, ಅಳವಂಡಿಗೆ ತೆರಳಲು ಇದೇ ರಸ್ತೆ ಅವಲಂಬಿಸದ್ದಾರೆ. ಆದರೆ, ರಸ್ತೆ ಹಾಳಾಗಿ, ಡಾಂಬರ್ ಕಿತ್ತು ಹೋಗಿದ್ದು ಗುಂಡಿಗಳು ಬಿದ್ದಿವೆ. ರಸ್ತೆಯ ಎರಡು ಬದಿ ಜಾಲಿಗಿಡಗಳು ಆವರಿಸಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಸಾರಿಗೆ ಸಂಸ್ಥೆ ಬೆಳಗಿನ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ರಸ್ತೆ ದುರಸ್ತಿಗೊಳಿಸಬೇಕು. ಜತೆಗೆ ಬಸ್ ಸಂಚಾರ ಆರಂಭಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಸ್ಥಳಕ್ಕೆ ಬೋಚನಹಳ್ಳಿ ಗ್ರಾಪಂ ಸದಸ್ಯರಾದ ಸಂತೋಷ ಹಳ್ಳಿ, ಸಿದ್ದಣ್ಣ ಹಲವಾಗಲಿ, ಸಾರೆಪ್ಪ, ನಿಂಗಪ್ಪ ಮೇಟಿ, ಚನ್ನಪ್ಪ ಆಗಮಿಸಿ ರಸ್ತೆ ಸರಿಪಡಿಸುವ ಭರವಸೆ ನೀಡಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ವಿದ್ಯಾರ್ಥಿಗಳಾದ ಮಂಜುನಾಥ ಅಂಬಿಗೇರ, ಲೋಹಿತ್, ರಫೀಕ್, ಪವಿತ್ರಾ, ಜ್ಯೋತಿ, ಗಂಗಮ್ಮ, ಶಿವಕುಮಾರ, ಹನುಮಂತ ಇತರರಿದ್ದರು.