

ಅಳವಂಡಿ: ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆ ಸರಿಯಾಗಿ ಮಾಡದೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಹೋಬಳಿ ವ್ಯಾಪ್ತಿಯ ರೈತರು ಬೆಟಗೇರಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಕೆಲ ದಿನಗಳ ಹಿಂದ ಸುರಿದ ಸತತ ಮಳೆಗೆ ಮೆಕ್ಕೆಜೋಳ, ಈರುಳ್ಳಿ ಸೇರಿ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಅಂತರ್ಜಲ ವೃದ್ಧಿಯಾಗಿ ತೆರೆದ ಬಾವಿ ಹಾಗೂ ಬೋರ್‌ವೆಲ್‌ನಲ್ಲಿ ನೀರು ಉಕ್ಕಿ ಜಮೀನಿನಲ್ಲಿ ಹರಿಯುತ್ತಿದ್ದರಿಂದ ಬೆಳೆ ಕೈಗೆ ಸಿಗುತ್ತಿಲ್ಲ. ಆದರೆ, ಬೆಗೇರಿಗೆ ಭೇಟಿ ನೀಡಿದ ಅಧಿಕಾರಿಗಳು ಸರಿಯಾಗಿ ಸ್ಥಳ ಪರಿಶೀಲಿಸದೆ ಬೆಳೆಹಾನಿ ಸಮೀಕ್ಷೆ ಮಾಡಿ ಹೋಗಿದ್ದಾರೆ ಎಂದು ದೂರಿದರು. ಬೋರ್‌ವೆಲ್‌ಗಳು ಉಕ್ಕಿ ಬೆಳೆ ಹಾನಿಯಾದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮೀಕ್ಷೆ ಮಾಡುವಲ್ಲಿ ನಿರ್ಲಕ್ಷಿಸಿದ್ದಾರೆ. ಬುಧವಾರ ಕೊಪ್ಪಳದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬೆಳೆಹಾನಿ ಸಮೀಕ್ಷೆ ಮಾಡಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಂಡ ಈಗ ಮತ್ತೆ ಬೆಳೆಹಾನಿ ಸಮೀಕ್ಷೆ ಕೈಗೊಂಡಿದ್ದು, ಪಾರದರ್ಶಕವಾಗಿ ನಡೆಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಉಪ ತಹಸೀಲ್ದಾರ್ ಶ್ರೀನಾಥ ಜೋಶಿ, ಕಂದಾಯ ನಿರೀಕ್ಷಕ ಸುರೇಶ ಹಂದ್ರಾಳ, ರೈತ ಸಂಪರ್ಕ ಕೇಂದ್ರದ ಎಎಒ ವೀರೇಶ ಪಟ್ಟೇದ, ಗ್ರಾಮ ಲೆಕ್ಕಾಧಿಕಾರಿ ಶಿವಲಿಂಗಪ್ಪ ಭೇಟಿ ನೀಡಿ ಕೃಷಿಕರ ಮನವಿ ಆಲಿಸಿದರು. ರೈತರಾದ ಮಂಜು ಬಿಸರಳ್ಳಿ, ಇಮಾಮ್‌ಸಾಬ್, ಮುತ್ತು ಹೂಗಾರ, ಉಮೇಶ ಕೊಪ್ಪಳ, ಉಮೇಶ ಕಡಳ್ಳಿ, ಹನುಮರಡ್ಡಿ ಬೇಲಡಗಿ, ಕಪ್ಪತ್ತಪ್ಪ ಕಡಳ್ಳಿ, ಯಂಕಣ್ಣ, ಶಿವು, ಭೀಮಣ್ಣ, ಗೂಳಪ್ಪ ಮಾಳೆಕೊಪ್ಪ, ಪ್ರಶಾಂತ ಬೆಣ್ಣಿ, ಗವಿಸಿದ್ದಪ್ಪ ಸಂಗಟಿ, ಏಳುಕೋಟೇಶ ಕೋಮಲಾಪುರ, ಮಂಜು, ರಮೇಶ ಜಕ್ಕಲಿ ಇತರರಿದ್ದರು.