

ಅಳವಂಡಿ: ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕಲಿಕಾ ಟಾಟಾ ಟ್ರಸ್ಟ್‌ನ ಸಂಚಾಲಕ ಮಂಜುನಾಥ ಕುರಿ ಹೇಳಿದರು.
ಸಮೀಪದ ನೀರಲಗಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲಿಕಾ ಟಾಟಾ ಟ್ರಸ್ಟ್, ರಂಗಚೇತನ ಸಾಂಸ್ಕೃತಿ ಕಲಾ ತಂಡ ಚಿಕ್ಕಮ್ಯಾಗೇರಿ ವತಿಯಿಂದ ಆಯೋಜಿಸಿದ್ದ ನಾಟಕ ಹಾಗೂ ಜಾನಪದ ಹಾಡುಗಳ ಸಮುದಾಯ ಜನಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಗುರುವಾರ ಮಾತನಾಡಿದರು.
ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಸಮುದಾಯ ಹಾಗೂ ಪಾಲಕರು ಕಣ್ಗಾವಲು ಇಡಬೇಕು. ಶಿಕ್ಷಣ ಪಡೆದ ಮಕ್ಕಳಿಂದ ಗ್ರಾಮಾಭಿವೃದ್ಧಿ ಸಾಧ್ಯ ಎಂದರು. ಮುಖ್ಯ ಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗುವಲ್ಲಿ ಮನೆ ಮತ್ತು ಶಾಲೆಯಲ್ಲಿ ಪೂರಕ ವಾತಾವರಣ ಅವಶ್ಯ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದರು.
ರಂಗಚೇತನ ಸಾಂಸ್ಕೃತಿಕ ಕಲಾ ತಂಡದಿಂದ ನಾಟಕ ಹಾಗೂ ಜಾನಪದ ಹಾಡುಗಳ ಮೂಲಕ ಸಮುದಾಯ ಜಾಗೃತಿ ಕಾರ್ಯಕ್ರಮ ನಡೆಯಿತು. ಶಿಕ್ಷಕರಾದ ಪಕೀರಪ್ಪ ಹರಿಜನ, ಸುರೇಶ ಹಡಪದ, ಕೃಷ್ಣಪ್ಪ ತಳಕಲ್, ಅಂದಪ್ಪ ಹಾರೋಗೇರಿ, ಹನುಮಂತಪ್ಪ ಕಟಾಂಬ್ಲಿ, ಆಶಾಬೀ ಹಡಗಲಿ, ನೇತ್ರಾವತಿ ಆನಂದಳ್ಳಿ, ವಿಜಯಲಕ್ಷ್ಮೀ ಇತರರಿದ್ದರು.