

ಅಳವಂಡಿ: ಭಾರತ 2037 ರೊಳಗೆ ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ದೃಷ್ಟಿಯಿಂದ ಮೇಕ್ ಇನ್ ಇಂಡಿಯಾ ನೀತಿಯಂತೆ ಅಡುಗೆ ತೈಲ ಉತ್ಪಾದನೆಗೆ ಒತ್ತು ನೀಡುತ್ತಿದೆ ಎಂದು ಬೆಂಗಳೂರಿನ ತೋಟಗಾರಿಕೆ ಅಪರ ನಿರ್ದೇಶಕ (ತಾಳೆಬೆಳೆ) ಡಾ.ಪಿ.ಎಂ.ಸೊಬರದ ತಿಳಿಸಿದರು.
ಸಮೀಪದ ಬಿಸರಳ್ಳಿ ಗ್ರಾಮದಲ್ಲಿ ಜಿಪಂ, ತೋಟಗಾರಿಕೆ ಇಲಾಖೆ, ತ್ರಿಎಫ್ ಆಯಿಲ್ ಪಾಮ್ ಪ್ರೈ.ಲಿ. ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 2025-26 ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ತಾಳೆ ಬೆಳೆ ಬೇಸಾಯ ಕುರಿತು ರೈತರಿಗೆ ತರಬೇತಿ ಹಾಗೂ ಮೆಗಾ ಡ್ರೈವ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದೇಶದಿಂದ ಅಡುಗೆ ಎಣ್ಣೆ ಆಮದು ಕಡಿಮೆ ಮಾಡುವ ದೃಷ್ಟಿಯಿಂದ ರೈತರಿಗೆ ತಾಳೆ ಬೆಳೆ ಬೆಳೆಯಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ರೈತರು ಇದರ ಉಪಯೋಗ ಪಡೆಯಬೇಕು ಎಂದರು.
ತೋಟಗಾರಿಕೆ ಉಪನಿರ್ದೆಶಕ ಕೊಪ್ಪಳ ಕೃಷ್ಣ ಉಕ್ಕುಂದ ಮಾತನಾಡಿ, ತಾಳೆ ಬೆಳೆಯುವ ರೈತರಿಗೆ ಸರ್ಕಾರ ಉಚಿತವಾಗಿ ಗಿಡಗಳನ್ನು ಹಾಗೂ ಮೂರು ವರ್ಷಗಳ ಕಾಲ ಗೊಬ್ಬರವನ್ನು ನೀಡುತ್ತದೆ. ನಂತರ ತಾಳೆ ಬೆಳೆಯನ್ನು ಸರ್ಕಾರವೇ ಬೆಂಬಲ ಬೆಲೆಯಡಿ ಖರೀದಿಸಲಿದೆ. ಮೂರು ವರ್ಷದ ನಂತರ ಫಸಲು ಬರಲಿದೆ. ಈ ಅವಧಿಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯಬಹುದು ಎಂದರು.
ತ್ರಿಎಫ್ ಆಯಿಲ್ ಪಾಮ್ ಡಿಜಿಎಂ ಬಸವಕುಮಾರ ಮಾತನಾಡಿದರು. ಸಹಾಯಕ ವ್ಯವಸ್ಥಾಪಕ ಧರ್ಮರಾಜ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಯೋಗೀಶ್ವರ ಗಂಗಾವತಿ, ಶಿವಯೋಗಿ ಕುಷ್ಟಗಿ, ದುರ್ಗಾಪ್ರಸಾದ, ಮಂಜುನಾಥ ಲಿಂಗಣ್ಣವರ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರುದ್ರಪ್ಪ ಬೀಡನಾಳ, ಬಸವರಾಜ ರಾಂಪೂರ, ಮಲ್ಲಿಕಾರ್ಜುನ ಬಂಡಿ, ವಿಜಯ ಮಹಾಂತೇಶ, ರೈತರಾದ ಚನ್ನಬಸನಗೌಡ, ನಾಗಪ್ಪ ಬಿಕನಳ್ಳಿ, ನಾಗರಾಜ ಮೇಗಳಮನಿ, ಸೈಯದ್‌ಸಾಬ, ಮಂಜುಳಾ, ವಿಮಲಾಕ್ಷಿ, ನಿಂಗಮ್ಮ, ಲಕ್ಷ್ಮವ್ವ ಇತರರಿದ್ದರು.