ದುರ್ಗಾದೇವಿ ರಥೋತ್ಸವ ಅದ್ದೂರಿ > ಬೆಟಗೇರಿಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು

ALD0 1
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾದೇವಿ ರಥೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು.
Published on

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಆರಾಧ್ಯ ದೇವತೆ ದುರ್ಗಾದೇವಿ ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.

ಹೂವಿನಹಡಗಲಿ ಡಾ.ಹಿರೇಶಾಂತವೀರ ಸ್ವಾಮೀಜಿ, ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯರು ದ್ವಜಾರೋಹಣ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ತೇರಿಗೆ ಉತ್ತತ್ತಿ ಬಾಳೆಹಣ್ಣು ಎಸೆದು ಭಖ್ತರು ಹರಕೆ ಸಲ್ಲಿಸಿದರು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ದುರ್ಗಾದೇವಿ ಜಾತ್ರೋತ್ಸವವು ಮಾ.24ರಿಂದ ಆರಂಭಗೊಂಡಿದ್ದು, ವಿವಿಧ ಧಾರ್ಮಿಕ ಕೈಂಕರ್ಯಗಳು ಮಾ.28ರದವರೆಗೆ ಅದ್ದೂರಿಯಾಗಿ ಜರುಗಲಿವೆ. ಮಹಾಶಿವರಾತ್ರಿ ಜಾಗರಣೆ ದಿನದಂದು ಶ್ರೀ ದುರ್ಗಾದೇವಿಯ ರಥದ ಚಕ್ರಗಳನ್ನು ಹೊರಗಡೆ ತೆಗೆಯುವ ಮೂಲಕ ಜಾತ್ರೆಗೆನ ಚಾಲನೆ ನೀಡಲಾಗಿದೆ. ಆ ದಿನದಂದು ಬೆಟಗೇರಿ ಗ್ರಾಮಕ್ಕೆ ದೇವತೆಯನ್ನು ಕರೆತಂದಿದ್ದ ಎನ್ನಲಾದ ಭಕ್ತ ಗೊರವರ ಮನೆಯಲ್ಲಿ ಉಡಿ ತುಂಬಿಸಿಕೊಂಡು ಬರುವ ಪದ್ಧತಿ ಮುಂದುವರಿದೆ. ಬಳಿಕ ಡೊಳ್ಳು, ಭಜನೆ ಹಾಗೂ ಸೋಬಾನ ಪದ ಹಾಡುವ ಮೇಳದೊಂದಿಗೆ ಗ್ರಾಮದಲ್ಲಿ ದುರ್ಗಾದೇವಿಯ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಈ ವೇಳೆ ಭಕ್ತರು ನೀಡುವ ಹಣ, ಧಾನ್ಯ ಸಂಗ್ರಹಿಸಿ, ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಗೊರವರ ಕನಸಲ್ಲಿ ಬಂದಿದ್ದ ದೇವಿ: ಶ್ರೀ ದುರ್ಗಾದೇವಿಯು ಗ್ರಾಮದಲ್ಲಿ ನೆಲೆಸಿರಲು ಒಂದು ಇತಿಹಾಸವಿದೆ. ಹಿಂದೆ ಬೆಟಗೇರಿ ಗ್ರಾಮದಲ್ಲಿ ಮಾರಕ ಕಾಯಿಲೆಯಿಂದ ಸಾವು-ನೋವು ಹೆಚ್ಚಾಗಿತ್ತು. ಗ್ರಾಮದ ಗೊರವನ ಕನಸಿನಲ್ಲಿ ದೇವಿ ಬರುತ್ತಳೆ. ‘ನಿಮ್ಮ ಗ್ರಾಮದ ಶ್ರೀ ಮೈಲಾರಲಿಂಗನ ದೇವಸ್ಥಾನದ ಎದುರು ಬೇವಿನ ಸಸಿ ಹುಟ್ಟಿರುತ್ತದೆ. ಅದರಲ್ಲಿ ನಾನು ನೆಲೆಸುತ್ತೇನೆ. ಗಜೇಂದ್ರಗಡದಲ್ಲಿ ನೆಲೆಸಿರುವ ನನ್ನನ್ನು ಕರೆದುಕೊಂಡು ಬನ್ನಿ’ ಎಂದು ಹೇಳುತ್ತಾಳೆ. ಆಗ ದೇವಿಯನ್ನು ಗ್ರಾಮಕ್ಕೆ ಕರೆತರಲಾಗಿದೆಂಬ ಪ್ರತೀತಿ ಇದೆ. ಇಂದಿಗೂ ಬೇವಿನ ಮರದಲ್ಲಿ ದೇವಿ ಇದ್ದಾಳೆ ಎಂದು ನಂಬಿರುವ ಭಕ್ತರು ಗಡೇದ ದುರ್ಗಮ್ಮ ಎಂದು ಕರೆಯುತ್ತಾರೆ.

ಸೋಮವಾರ ಕಂಕಣಧಾರಣೆ, ಲಘು ರಥೋತ್ಸವ, ಮಂಗಳವಾರ ಪಾಯಸ ಹಾಗೂ ಅಗ್ನಿಹಾಯುವ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿದವು. ಪಾಯಸ ಕಾರ್ಯಕ್ರಮದ ಅಂಗವಾಗಿ ಕುಂಬಾರ ಮನೆಯಿಂದ ತಂದ ಹೊಸ ಮಡಕೆ ತರಲಾಯಿತು. ನಂತರ ಗ್ರಾಮದ ಹಿರಿಯರು, ಪೂಜಾರಿಗಳು ಮಡಕೆಯೊಂದಿಗೆ ಊರ ಮುಂದಿನ ಕೊಣಕೇರಿ ಹಳ್ಳಕ್ಕೆ ತೆರಳಿ ಸ್ನಾನ ಮಾಡಿ, ಮಡಿ ಉಡಿಯಿಂದ ನೀರು ತಂದು, ದೇವಿಯ ಎದುರುಗಡೆ ಒಲೆ ಇಟ್ಟು, ಪಾಯಸ ಮಾಡಲಾಯಿತು. ಬಳಿಕ ನೆರೆದಿದ್ದ ಅಪಾರ ಪ್ರಮಾಣದ ಭಕ್ತರಿಗೆ ಪ್ರದರ್ಶಿಸಲಾಯಿತು. ನಂತರ ಭಕ್ತರು ಅಗ್ನಿಹಾಯ್ದು ಭಕ್ತಿ ಮೆರೆದರು.

ಭಕ್ತಿ ಹಿತಚಿಂತನ ಸಭೆ

ಮಾ.27 ಗುರುವಾರ ಕಡುಬಿನ ಕಾಳಗ, ಮದ್ದು ಸುಡುವ ಕಾರ್ಯಕ್ರಮ, ಅನ್ನ ಸಂತರ್ಪಣೆ, ಭಕ್ತಿ ಹಿತಚಿಂತನಾ ಸಭೆ ನಡೆಯಲಿದೆ. ಗಿಣಿಗೇರಿಯ ಆನೆಗೊಂದಿ ಸಂಸ್ಥಾನ ಸರಸ್ವತಿ ಪೀಠದ ಅಭಿನವ ಶ್ರೀಕಂಠ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಕಲಾವಿದ ವೈಶಂಪಾಯನ ಅವರಿಂದ ಹಾಸ್ಯ ಸಂಜೆ, ಜನಪದ ಕಲಾವಿದ ಮೆಹಬೂಬ ಕಿಲ್ಲೇದಾರ ಅವರಿಂದ ಜನಪದ ಸಂಜೆ ಹಾಗೂ ಹಾಗೂ ನಾಟಕ, ಬಯಲಾಟ, ಮನರಂಜನಾ ಪ್ರದರ್ಶನಗಳು ಬಳ್ಳೊಳ್ಳಿಯವರ ಜಾಗದಲ್ಲಿ ನಡೆಯಲಿವೆ. ಮಾ.28ರ ಶುಕ್ರವಾರ ನೈಸರ್ಗಿಕ ಕೃಷಿ ಗೋಷ್ಠಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಳವಂಡಿಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ವಹಿಸುವರು. ಕೃಷಿ ತಜ್ಞರಾದ ಮಲ್ಲೇಶಪ್ಪ ಬಿಸಿರೊಟ್ಟಿ, ಡಾ.ಬಸವರಾಜ ನಾವಿ ಅವರು ನೈಸರ್ಗಿಕ ಕೃಷಿ ಬಗ್ಗೆ ಮಾಹಿತಿ ನೀಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net