ಹಿಂದುಗಳಿಂದಲೇ ಮೊಹರಂ ಆಚರಣೆ - ಗ್ರಾಮಸ್ಥರಿಂದ ನಾನಾ ಹರಕೆ ಸಲ್ಲಿಕೆ

ald-1
ಗ್ರಾಮದ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಅಲಾಯಿ ದೇವರುಗಳು ಮತ್ತು ಅಳವಂಡಿ ಸಮೀಪದ ಹೈದರನಗರ ಗ್ರಾಮದಲ್ಲಿನ ಮಸಿದಿಯ ಹೊರನೋಟ.
Published on

ಅಳವಂಡಿ: ಮುಸ್ಲಿಮರಿಲ್ಲದ ಊರಲ್ಲಿ ಹಲವು ವರ್ಷಗಳಿಂದ ಹಿಂದುಗಳಿಂದಲೇ ಮೊಹರಮ್ ಆಚರಿಸುತ್ತಿದ್ದು, ಈ ವರ್ಷವೂ ಹಬ್ಬದ ಸಂಭ್ರಮ ಗ್ರಾಮದಲ್ಲಿ ಇಮ್ಮಡಿಗೊಂಡಿದೆ.

ಸುಮಾರು 350 ಕುಟುಂಬಗಳಿರುವ ಸಮೀಪದ ಹೈದರನಗರ ಗ್ರಾಮದಲ್ಲಿ ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ನೂರಾರು ವರ್ಷಗಳಿಂದ ಆಚರಿಸಲಾಗುತ್ತಿದೆ ಎನ್ನುವುದು ಇಲ್ಲಿನ ಜನರ ಮಾಹಿತಿ.

ಬಹುಭಾಗ ಲಂಬಾಣಿ ಸಮುದಾಯವರೇ ಇರುವ ಗ್ರಾಮದಲ್ಲಿ ಶ್ರದ್ಧಾ-ಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ದಿನಗಳಲ್ಲಿ ಉಪವಾಸ ವೃತ ಮಾಡುವುದು, ಮಕ್ಕಳಿಗೆ ಲಾಡಿ ಹಾಕಿಸುವುದು, ದೇವರಿಗೆ ನೈವೇದ್ಯ ಸಲ್ಲಿಸುವುದು ಮತ್ತು ಹಲವಾರು ವಿವಿಧ ಕರಡಿ, ಹುಲಿ ಸೇರಿದಂತೆ ನಾನಾ ವೇಷಗಳನ್ನು ಹಾಕಿ ಹರಕೆ ಸಲ್ಲಿಸುವ ವಾಡಿಕೆ ಇದೆ.

ಹಿಂದುಗಳಿಂದ ಮಸೀದಿ ನಿರ್ಮಾಣ: ಪೀರಲು ದೇವರು ಪ್ರತಿಷ್ಠಾಪಿಸುವ ಮಸೀದಿಯನ್ನು 30 ವರ್ಷಗಳ ಹಿಂದೆ ಹಿಂದುಗಳೇ ಕಟ್ಟಿಸಿರುವುದು ವಿಶೇಷ. ಇದಕ್ಕೂ ಮೊದಲು ತಗಡಿನ ಶೆಡ್ ನಿರ್ಮಿಸಿ ಪೀರಲು ದೇವರನ್ನು ಪ್ರತಿಷ್ಠಾಪಿಸಲಾಗುತ್ತಿತ್ತು.

ಮೊಹರಮ್ ಆಚರಣೆಯನ್ನು ಮುಸ್ಲಿಂ ಧಾರ್ಮಿಕ ವಿಧಿ-ವಿಧಾನಗಳಂತೆಯೇ ಮಾಡಲಾಗುತ್ತಿದ್ದು, ಈ ಕಾರ್ಯವನ್ನು ಬೆಳಗಟ್ಟಿ ಗ್ರಾಮದ ಇಮಾಮಸಾಬ ಹುಡೇದಮನಿ ಅವರು ಹಬ್ಬದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಿದ್ದಾರೆ.

ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರೂ ಭಕ್ತಿ, ನಂಬಿಕೆಯಿಂದ ಮೊಹರಮ್ ಹಬ್ಬವನ್ನು ಆಚರಿಸಿ ಸೌಹಾರ್ದತೆ ಮೆರೆಯುತ್ತಿದ್ದಾರೆ. ಹಿರಿಯರು, ಯುವಕರು, ಮಕ್ಕಳು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತೇವೆ ಎಂದು ಯುವಕ ವಿರೂಪಾಕ್ಷಿ ಬಡಿಗೇರ ತಿಳಿಸಿದರು.

ಗ್ರಾಮದಲ್ಲಿ ಹಬ್ಬದ ಸಂಭ್ರಮ: ಹೈದರನಗರದಲ್ಲಿ ಬಹುಭಾಗ ಲಂಬಾಣಿಗರೇ ಇದ್ದು, ಕುರುಬ, ವಾಲ್ಮೀಕಿ, ರಡ್ಡಿ ಹಾಗೂ ತರೆ ಸಮುದಾಯದ ಜನರು ವಾಸವಿದ್ದಾರೆ. ಇನ್ನು ಗ್ರಾಮದ ಮಸೀದಿಯಲ್ಲಿ 15 ಅಲಾಯಿ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಹಿಂದುಗಳೇ ದೇವರನ್ನು ಹೊರುತ್ತಾರೆ. ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಶನಿವಾರ ಕತಲ್‌ರಾತ್ ಹಾಗೂ ಭಾನುವಾರ ಮೊಹರಮ್ ಕೊನೆ ದಿನದ ಆಚರಣೆ ವಿಜೃಂಭಣೆಯಾಗಿರಲಿದೆ ಎಂಬುದು ಗ್ರಾಮಸ್ಥರ ಮಾಹಿತಿ.

====

ನಮ್ಮ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳಿಲ್ಲ. ಆದರೂ, ಅಲಾಯಿ ದೇವರನ್ನು ಪ್ರತಿಷ್ಠಾಪಿಸಿ ವಿವಿಧ ಕೈಂಕರ್ಯದೊಂದಿಗೆ ಮೊಹರಮ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಜಾತಿ, ಬೇಧ, ಭಾವವಿಲ್ಲದೇ ಎಲ್ಲರೂ ಹಬ್ಬದಲ್ಲಿ ಪಾಲ್ಗೊಳ್ಳುತ್ತೇವೆ.

> ಸಿದ್ದಪ್ಪ ಚೌಡಕಿ, ಗ್ರಾಮಸ್ಥ, ಹೈದರನಗರ

ಗ್ರಾಮದಲ್ಲಿ ಮುಸ್ಲಿಮರ‌್ಲಿಲದಿದ್ದರೂ ನಮ್ಮ ಹಿರಿಯರ ಪದ್ಧತಿಯಂತೆ ಮೊಹರಮ್ ಹಬ್ಬವನ್ನು ನಾವೆಲ್ಲ ಸೇರಿ ಸಮಭ್ರಮದಿಂದ ಆಚರಿಸುತ್ತಿದ್ದೇವೆ. ಯಾವುದೇ ತಾರತಮ್ಯವಿಲ್ಲದೇ ಭಕ್ತಿಯಿಂದ ಈ ಹಬ್ಬವನ್ನು ಮಾಡುತ್ತೇವೆ.

> ಬಸಪ್ಪ ವಾಲಿಕಾರ, ಗ್ರಾಮಸ್ಥ ಹೈದರನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net