ಅಲಸಂದಿ ಬೆಳೆಗಾರರಿಗೆ ಮಿಶ್ರ ಫಲ

ಅಲ಻ಸ಻ದಿ
ಯಲಬುರ್ಗಾ ತಾಲೂಕಿನ ಜರಕುಂಟಿ ಬಳಿಯ ಜಮೀನೊಂದರಲ್ಲಿ ಅಲಸಂದೆ ಬಳ್ಳಿಯಲ್ಲಿ ಕಾಯಿ ಕಟ್ಟಿರುವುದು.
Published on

ಯಲಬುರ್ಗಾ: ತಾಲೂಕಿನಲ್ಲಿ ಮುಂಗಾರು ಮಳೆ ಕೊರೆತೆಯಿಂದ ತಡವಾಗಿ ಬಿತ್ತನೆಗೊಂಡ ಅಲಸಂದೆ ಬೆಳೆ, ಹಲವು ರೈತರ ಕೈಹಿಡಿಯುವ ಭರವಸೆ ಹುಟ್ಟಿಸಿದ್ದು, ಕೆಲವರಿಗೆ ನಷ್ಟ ಉಂಟುಮಾಡಿದೆ.

ವರ್ಷದಿಂದ ವರ್ಷಕ್ಕೆ ಕ್ಷೇತ್ರದಲ್ಲಿ ಬೆಳೆಯ ವಿಸ್ತರಣೆ ಹೆಚ್ಚಾಗುತ್ತಿದೆ. ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಪ್ರಸಕ್ತ ವರ್ಷ 727 ಹೆಕ್ಟೇರ್‌ನಲ್ಲಿ ಅಲಸಂದೆ ಬಿತ್ತನೆ ಮಾಡಲಾಗಿದೆ.

ಈ ಪೈಕಿ ಯಲಬುರ್ಗಾ ಹೋಬಳಿ 352, ಹಿರೇವಂಕಲಕುಂಟಾ 315, ಕುಕನೂರು 4, ಮಂಗಳೂರು 56 ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯಲಾಗಿದೆ. ಈಗಾಗಲೇ ಹಲವೆಡೆ ಬಳ್ಳಿಯ ತುಂಬ ಕಾಯಿಕಟ್ಟಿದ್ದು, ಕೆಲವೆಡೆ ಕಳೆದ 15 ದಿನಗಳ ಹಿಂದೆ ಸುರಿದ ನಿರಂತರ ಮಳೆಯಿಂದ ಬೆಳೆಗೆ ಕೊಳೆರೋಗ ಕಾಣಿಸಿಕೊಂಡು ಹಾಳಾಗಿದೆ.

ರೈತರು ಈ ಹಿಂದೆ ಸಜ್ಜೆ, ಮೆಕ್ಕೆಜೋಳ, ನವಣೆ, ಎಳ್ಳು, ಜೋಳದ ಬೆಳೆಗಳಲ್ಲಿ ಅಲಸಂದೆಯನ್ನು ಕೇವಲ ಬಿಡಿಯಾಗಿ (ಅಕ್ಕಡಿ ಸಾಲಿನಲ್ಲಿ) ಬೆಳೆಯುತ್ತಿದ್ದರು. ಇದೀಗ ಇಡೀ ಹೊಲಕ್ಕೆ ಬಿತ್ತನೆ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಅಲಸಂದಿ ಬಿತ್ತನೆ ಪ್ರದೇಶ ಜಾಸ್ತಿಯಾಗುತ್ತಿದೆ.

ಹೆಸರು ಬೆಳೆಯಂತೆ ಅಲಸಂದಿ ಕೂಡ ಮೂರು ತಿಂಗಳ ಬೆಳೆಯಾಗಿದೆ. ತಡವಾಗಿ ಬಿತ್ತನೆಗೊಂಡ ಬೇರೆ ಬೇರೆ ಬೆಳೆಯಲ್ಲಿ ನಿರಂತರ ಮಳೆಯಿಂದ ಕಳೆ ಹೆಚ್ಚಾಗಿದೆ.

ಹೀಗಾಗಿ ಕೆಲ ರೈತರು ಬೆಳೆ ನಾಶಪಡಿಸಿದ್ದಾರೆ. ಇಂತಹ ಹಲವು ಸಂಕಷ್ಟಗಳ ನಡುವೆಯೂ ಬಿತ್ತನೆಗೊಂಡ ಅಲಸಂದೆ ಕಳೆದ ಬಾರಿಗಿಂತ ಈ ಬಾರಿ ರೈತರ ಕೈಹಿಡಿಯುವುದು ಅಷ್ಟಕ್ಕಷ್ಟೇ ಎನ್ನಬಹುದು.

ವಜ್ರಬಂಡಿ, ಕೋನಸಾಗರ, ಜರಕುಂಟಿ, ಬೂನಕೊಪ್ಪ, ಗೆದಗೇರಿ, ಮುರಡಿ, ಕುದ್ರಿಕೊಟಗಿ, ಹಗೇದಾಳ, ಮುಧೋಳ, ಚಿಕ್ಕೊಪ್ಪ, ಹೊಸಳ್ಳಿ, ದಮ್ಮೂರು, ಮಾರನಾಳ ಇತರೆಡೆ ಅಲಸಂದೆ ಬೆಳೆಯಲಾಗುತ್ತಿದೆ.

ಆದರೆ ಪ್ರತಿಸಲ ಬಿತ್ತನೆಗೊಳ್ಳುವ ಕಡೆ ಅಲಸಂದೆಗೆ ಕೊಳೆರೋಗ ಕಾಣಿಸಿಕೊಂಡು ಹಾಳಾಗಿದ್ದು, ಹೊಸದಾಗಿ ಬಿತ್ತನೆಯಾದ ಪ್ರದೇಶದಲ್ಲಿ ಉತ್ತಮ ಬೆಳೆ ಬೆಳೆದಿದ್ದು, ರೈತರು ಆದಾಯದ ನಿರೀಕ್ಷೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net