ಅಳಪೆ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತ್ಯು

mng--30 july alape
Published on

ಮಂಗಳೂರು: ನಗರದ ಹೊರ ವಲಯದ ಪಡೀಲ್ ಅಳಪೆ ಪಡ್ಪು ರೈಲ್ವೇ ಬ್ರಿಡ್ಜ್ ಸಮೀಪದ ಹಳ್ಳಕ್ಕೆ ಭಾನುವಾರ ಸಂಜೆ ಈಜಲು ತೆರಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.


ಅಳಪೆ ಪಡ್ಪು ರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಮೃತಪಟ್ಟ ಯುವಕರು.
ಘಟನೆ ವಿವರ: ಭಾನುವಾರ ಸಂಜೆ 5 ಗಂಟೆ ವೇಳೆ 6ಮಂದಿ ಗೆಳೆಯರು ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದರು. ಈ ಸಂದರ್ಭ ವರುಣ್ ಮತ್ತು ವೀಕ್ಷಿತ್ ಹಳ್ಳದ ದಡದಲ್ಲೇ ಕುಳಿತಿದ್ದು, ಉಳಿದವರು ಕ್ರಿಕೆಟ್ ಮೈದಾನಕ್ಕೆ ತೆರಳಿದ್ದರು. ಇವರಿಬ್ಬರನ್ನೂ ಆಟಕ್ಕೆ ಒತ್ತಾಯಿಸಿದರೂ ಇವರೂ ಹೋಗಲೇ ಇಲ್ಲ. ಹಳ್ಳದ ದಡದಲ್ಲಿ ಕುಳಿತಿದ್ದ ಸಂದರ್ಭ ವರುಣ್ ಆಯ ತಪ್ಪಿ ನೀರಿಗೆ ಬಿದ್ದಿದ್ದಾರೆ. ಇದನ್ನು ನೋಡಿದ ವೀಕ್ಷಿತ್ ಕೂಡಲೇ ಹಳ್ಳಕ್ಕೆ ಹಾರಿದ್ದಾರೆ. ಆದರೆ ಹಳ್ಳದಲ್ಲಿ ಹೂಳು ತುಂಬಿದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಘಟನೆ ನಡೆದ ಕೆಲವೇ ಕ್ಷಣದಲ್ಲಿ ಕಂಕನಾಡಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬಳಿಕ ಅಗ್ನಿಶಾಮಕ ದಳದವರು ಬಂದು ಕಾರ್ಯಾಚರಣೆ ನಡೆಸಿದರು. ಸುಮಾರು ಹೊತ್ತಿನ ಬಳಿಕ ವರುಣ್ ಮೃತದೇಹ ಪತ್ತೆಯಾಗಿದ್ದು, ಹಳ್ಳದ ದಡಕ್ಕೆ ತರಲಾಯಿತು. ಆದರೆ ಇಷ್ಟು ಗಂಭೀರ ಪ್ರಕರಣ ನಡೆದರೂ ಘಟನಾ ಸ್ಥಳಕ್ಕೆ ಆಂಬುಲೆನ್ಸ್ ಬರುವಾಗ ವಿಳಂಬವಾಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಸಂಜೆ ವೇಳೆ ಘಟನೆ ನಡೆದಿದ್ದು, ಅಗ್ನಿಶಾಮಕ ದಳ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ ಕೆಲವೇ ಕ್ಷಣದಲ್ಲಿ ಕತ್ತಲು ಆವರಿಸಿತ್ತು. ಇದರಿಂದ ಕಾರ‌್ಯಾಚರಣೆಗೆ ಅಡ್ಡಿಯಾಗಿದೆ. ಆದರೂ ಸಿಬ್ಬಂದಿ ನಿರಂತರ ಕಾರ‌್ಯಾಚರಣೆ ಮುಂದುವರಿಸಿ, ವೀಕ್ಷಿತ್‌ನ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.


ಇಬ್ಬರು ಯುವಕರು ನೀರಿನಲ್ಲಿ ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಅವರ ಮನೆಯವರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ಶಾಸಕ ಕಾಮತ್ ಭೇಟಿ: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತ ವ್ಯಕ್ತಿಗಳ ಕುಟುಂಬಸ್ಥರ ಜತೆ ಮಾತುಕತೆ ನಡೆಸಿ, ಅವರನ್ನು ಸಂತೈಸಿದರು. ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಶೋಭಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಮನೆಗೆ ಆಧಾರಸ್ತಂಭವಾಗಿದ್ದರು

ದುರ್ಘಟನೆಯಲ್ಲಿ ಮೃತಪಟ್ಟ ವರುಣ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ವೀಕ್ಷಿತ್ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು. ವರುಣ್ ಅವರಿಗೆ ತಂದೆ-ತಾಯಿ ಹಾಗೂ ತಮ್ಮ ಇದ್ದಾನೆ. ವೀಕ್ಷಿತ್ ತಂದೆ-ತಾಯಿ ಹಾಗೂ ಓರ್ವ ಅಣ್ಣಾ ಇದ್ದಾರೆ. ಇಬ್ಬರು ಯುವಕರು ಕ್ರೀಯಾಶೀಲರಾಗಿದ್ದು, ಮನೆಯ ಆಧಾರ ಸ್ತಂಭವಾಗಿದ್ದರು. ಈ ಯುವಕರ ಅಗಲುವಿಕೆ ಕುಟುಂಬಕ್ಕೆ ಹಾಗೂ ಸ್ನೇಹಿತ ವಲಯಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net