ರೈತರಿಗೆ ಅನ್ಯಾಯವಾದ್ರೆ ಸಹಿಸಲ್ಲ

2510Aland1
ಆಳಂದನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಬಿ.ಆರ್.ಪಾಟೀಲ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಬೆಳೆ ವಿಮೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ್ ಮಾತನಾಡಿದರು. ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ತಾಪಂ ಇಒ ಮಾನಪ್ಪ ಕಟ್ಟಿಮನಿ ಇದ್ದರು.
Published on

ಆಳಂದ: ಮುಂಗಾರು ಹಂಗಾಮು ೨೦೨೩-೨೪ನೇ ಸಾಲಿನ ಬೆಳೆ ವಿಮೆ ವಿಷಯದಲ್ಲಿ ರೈತರಿಗೆ ಅನ್ಯಾಯವಾದರೆ ಸಹಿಸಲ್ಲ. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಧಾವೆ ಹೂಡಲಾಗುವುದು ಎಂದು ಶಾಸಕ ಬಿ.ಆರ್.ಪಾಟೀಲ್ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೆಳೆ ವಿಮೆ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಮೆ ಕಂಪನಿಗಳಿಗೆ ವ್ಯಾಪರವೇ ಮುಖ್ಯ, ರೈತರ ಸಮಸ್ಯೆ ಬೇಕಿಲ್ಲ. ಅಧಿಕಾರಿಗಳು ಅಂತಹ ಕಂಪನಿಗಳ ಪರ ನಿಲ್ಲದೆ ರೈತರ ಬೆಂಬಲಕ್ಕೆ ಬರಬೇಕು. ಪ್ರಾಮಾಣಿಕವಾಗಿ ವಿಮೆ ಕಟ್ಟಿದ ರೈತರ ಬೆಳೆಗಳನ್ನು ಪಾರದರ್ಶಕತೆಯಿಂದ ಸಮೀಕ್ಷೆ ಮಾಡಿ ವರದಿ ಸಲ್ಲಿಸಬೇಕು. ಕಳೆದ ಬಾರಿ ಕೋಡಲಹಂಗರಗಾ, ಕಿಣ್ಣಿಸುಲ್ತಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆದ ತಪ್ಪುಗಳನ್ನು ಮರುಕಳಿಸಿದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ್ ಪಾಟೀಲ್ ಮಾತನಾಡಿ, ಜೂನ್‌ನಲ್ಲಿ ೯೮ ಮಿಮೀ ಮಳೆ ಆಗಬೇಕಿತ್ತು, ಆದರೆ ೨೯ ಮಿಮೀ ಮಳೆ ಬಿದ್ದಿದೆ. ಇನ್ನು ಜುಲೈನಲ್ಲಿ ೧೪೧ ಮಿಮೀ ಆಗಬೇಕಿತ್ತು, ೨೧೩ ಮಿಮೀ ವರ್ಷಧಾರೆ ಬಿದ್ದಿದೆ. ಇನ್ನು ಆಗಷ್ಟ್ನಲ್ಲಿ ೧೫೩ರ ಬದಲು ಕೇವಲ ೨೦, ಸೆಪ್ಟೆಂಬರ್‌ನಲ್ಲಿ ೧೮೦ರಲ್ಲಿ ೧೪೧, ಅಕ್ಟೋಬರ್‌ನಲ್ಲಿ ೭೩ರ ಬದಲು ಕೇವಲ ೧೪ ಮಿಮೀ ಮಳೆಯಯಾಗಿದೆ. ಮಳೆ ಕೊರತೆಯಿಂದಾಗಿ ಎಲ್ಲೆಡೆ ತೇವಾಂಶ ಕಮ್ಮಿಯಾಗುತ್ತಿದೆ ಎಂದರು.

ಈ ಬಾರಿ ೧,೩೩,೫೯೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು, ೧,೩೦,೩೮೮ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮುಗಿದಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ತೊಗರಿ ೨೮,೫೨೫, ಹೆಸರು ೧೭೯, ಉದ್ದು ೪೨೪, ಸೋಯಾಬೀನ್ ೧೦,೪೩೨, ಸೂರ್ಯಕಾಂತಿ ೩೯೮, ಕಬ್ಬು ೩೭೫ ಸೇರಿ ಒಟ್ಟು ೪೩, ೭೩೩ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ತಾಲೂಕಿನಲ್ಲಿ ೪೬,೮೪೭ ರೈತರು ಬೆಳೆ ವಿಮೆಗೆ ಹಣ ಸಂದಾಯ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ತಾಪಂ ಇಒ ಮಾನಪ್ಪ ಕಟ್ಟಿಮನಿ, ಗ್ರಾಮೀಣ ಕುಡಿವ ನೀರು ವಿಭಾಗದ ಎಇಇ ಸಂಗಮೇಶ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ ಇತರರಿದ್ದರು.

೧೯೭೨ರಲ್ಲಿ ಆವರಿಸಿದ್ದ ಬರಗಾಲ ಮತ್ತೆ ಬರುತ್ತಿದೆ. ಮುಂಬರುವ ೯ ತಿಂಗಳಲ್ಲಿ ನೀರಿಗಾಗಿ ಅಗ್ನಿ ಪರೀಕ್ಷೆಯಿದೆ. ಅಂತರ್ಜಲ ಸಂಪೂರ್ಣ ಕುಸಿದಿದ್ದು, ಕುಡಿವ ನೀರಿನ ಅಭಾವ ಉಂಟಾಗಲಿದೆ. ಅಧಿಕಾರಿಗಳು ಈಗಿನಿಂದಲೇ ಜಲಕ್ಷಾಮ ಎದುರಿಸಲು ಸಿದ್ಧರಾಗಬೇಕು. ಸಮಸ್ಯೆ ಇದ್ದಲ್ಲಿ ಕೊಳವೆ ಬಾವಿ ಹಾಕಿ, ನೀರು ಸಿಗದಿದ್ದರೆ ತೆರೆದ ಬಾವಿ, ಕೆರೆಗಳಿಂದ ಪೈಪ್‌ಲೈನ್ ಮೂಲಕ ನೀರಿನ ವ್ಯವಸ್ಥೆ ಮಾಡಿ. ಇವ್ಯಾವು ಆಗದಿದ್ದಾಗ ಟ್ಯಾಂಕರ್ ವ್ಯವಸ್ಥೆ ಮಾಡೋಣ.
| ಬಿ.ಆರ್.ಪಾಟೀಲ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net