ಆಳಂದ ಶಾಸಕರ ಪತ್ರಕ್ಕೂ ನಮ್ಮ ದೆಹಲಿ ಪ್ರವಾಸಕ್ಕೂ ಸಂಬಂಧವಿಲ್ಲ

Alanda MLA's letter has nothing to do with our trip to Delhi
Published on

ವಿಜಯಪುರ: ಆಳಂದ ಶಾಸಕ ಬಿ.ಆರ್.ಪಾಟೀಲ ಬರೆದಿರುವ ಪತ್ರಕ್ಕೂ ನಮ್ಮ ದೆಹಲಿ ಪ್ರವಾಸಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದರು.

ವಿಜಯಪುರದ ಅವರ ತೋಟದ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸರ್ಕಾರ ರಚನೆಯಾದ ಮೇಲೆ ಸಹಜವಾಗಿ ಶಾಸಕರ ಮೇಲೆ ಹೆಚ್ಚು ಒತ್ತಡವಿರುತ್ತದೆ. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಶೇ. 6ರಷ್ಟು ಮಾತ್ರ ವರ್ಗಾವಣೆ ಮಾಡಬೇಕು ಎನ್ನುವ ನಿಯಮ ಇರುವ ಕಾರಣ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿಲ್ಲ. ಇತ್ತೀಚೆಗೆ ನಡೆದ ಶಾಸಕಾಂಗ ಸಭೆಯಲ್ಲಿ ಯಾವ ಶಾಸಕರಿಂದಲೂ ಭಿನ್ನಾಭಿಪ್ರಾಯ ವ್ಯಕ್ತವಾಗಿಲ್ಲ. ಈ ಕುರಿತು ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

ಕೆಲ ಹಿರಿಯ ನಾಯಕರು, ಸಚಿವರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಹೇಳಿದೆ. ನಾನು ಕೂಡ ದೆಹಲಿಗೆ ಹೋಗುತ್ತಿರುವೆ. ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮಿಸಿದ ವೇಳೆ ಅವರನ್ನು ಭೇಟಿಯಾಗಲು ಆಗಿರಲಿಲ್ಲ. ರಾಹುಲ್ ಅವರನ್ನು ಖುದ್ದು ಭೇಟಿ ಮಾಡಲು ದೆಹಲಿಗೆ ಹೋಗುತ್ತಿದ್ದೇನೆ ಎಂದರು.

ಸರ್ಕಾರ ಬೀಳಿಸುವ ಹುನ್ನಾರ ನಡೆದಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ಶಿವಾನಂದ ಪಾಟೀಲ, ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ನಾವು 136 ಶಾಸಕರು ಇದ್ದೇವೆ. ಹೇಗೆ ಬೀಳಿಸುತ್ತಾರೆ ಹೇಳಿ ಎಂದು ಪ್ರಶ್ನಿಸಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರೇ ಹೇಳಿದ್ದಾರೆ. ಸುಮ್ಮನೆ ಊಹಾಪೋಹ ಬೇಡ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net