ಇನ್ನೂ ಸಿಗದ ರೈತನ ಸುಳಿವು

ALM-10-1
Published on

ಆಲಮೇಲ: ಭಾರಿ ಮಳೆಗೆ ಸಮೀಪದ ಹಳ್ಳದಲ್ಲಿ ಬುಧವಾರ ತಾಲೂಕಿನ ಕುರಬತ್ತಹಳ್ಳಿ ಗ್ರಾಮದ ರೈತ ಬಸಂತರಾಯ ಸಿದ್ದಪ್ಪ ಅಂಬಾಗೋಳ(54) ಕೊಚ್ಚಿಕೊಂಡ ಹೋದ ಹಿನ್ನೆಲೆ ಶೋಧ ಕಾರ್ಯಾಚರಣೆ ಮೂರು ದಿನಗಳಿಂದ ನಡೆದಿದ್ದರೂ ಅವರ ಸುಳಿವು ಸಿಕ್ಕಿಲ್ಲ.

ತೋಟದಿಂದ ಮರಳಿ ಮನೆಗೆ ಬರುವಾಗ ಸಮೀಪದ ಹಳ್ಳದಲ್ಲಿ ಕೊಚ್ಚಿ ಹೋಗಿರಬಹುದು ಎಂದು ಅವರ ಕುಟುಂಬ ಶಂಕೆ ವ್ಯಕ್ತಪಡಿಸಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ಭೀಮಾ ನದಿಯಲ್ಲಿ ಶೋಧ ನಡೆಸಿದ್ದಾರೆ. ತಹಸೀಲ್ದಾರ್ ಸಂಜೀವಕುಮಾರ ದಾಸರ, ಕಂದಾಯ ನಿರೀಕ್ಷಕ ಎಂ.ಎ.ಅತ್ತಾರ, ಡಿ.ಎಂ.ತರದಾರ ನೇತೃತ್ವದ ತಂಡ ಖೇಡಗಿ ಗ್ರಾಮದ ನುರಿತ ಮೀನುಗಾರರೊಂದಿಗೆ ನದಿಗೆ ಇಳಿದು ಕಾರ್ಯಾಚರಣೆ ನಡೆಸಿದ್ದಾರೆ.

ಶನಿವಾರ ಡ್ರೋನ್ ಕ್ಯಾಮರಾ ಮೂಲಕ ಶೋಧ ನಡೆಸಿದರೂ ರೈತನ ಪತ್ತೆಯಾಗಲಿಲ್ಲ. ಶೀಘ್ರದಲ್ಲಿ ರೈತ ಬಸಂತರಾಯ ಸಿದ್ದಪ್ಪ ಅಂಬಾಗೋಳ ಅವರ ಪತ್ತೆ ಹಚ್ಚಲಾಗುವುದು ಎಂದು ಇಂಡಿ ಉಪ ವಿಭಾಗಾಧಿಕಾರಿ ರಾಹುಲ್ ಸಿಂಧೆ ತಿಳಿಸಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಮೂಲಕ ನಾವು ಶೋಧ ಕಾರ್ಯ ನಡೆಸಿದ್ದೇವೆ. ಮೂರು ದಿನ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ರೈತ ಬಸಂತರಾಯನಿಗೆ ದೇವರು ಕರುಣಿಸಿ ಜೀವಂತ ಮನೆಗೆ ಕಳುಹಿಸಲಿ.
ಸಂಜೀವಕುಮಾರ ದಾಸರ, ಸಿಂದಗಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net