ದಣಿದು ಬಂದ ಭಕ್ತರಿಗೆ ಅನ್ನ ದಾಸೋಹ

ALM-7-1
Published on

ಸೈಯದ್ ದೇವರಮನಿ
ಆಲಮೇಲ: ಪಟ್ಟಣದ ಸಿಂದಗಿ ರೋಡ್ ಯುಕೆಪಿ ಕ್ಯಾಂಪ್‌ನಲ್ಲಿ ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ತೆರಳುವ ಭಕ್ತಾಧಿಗಳಿಗೆ ಶ್ರೀಶೈಲ ಮಲ್ಲಿಕಾರ್ಜುನ ಸೇವಾ ಸಮಿತಿ ವತಿಯಿಂದ ನಿತ್ಯ 24 ಗಂಟೆ ಅನ್ನದಾಸೋಹ ನಡೆಯುತ್ತಿದೆ.

ದಣಿದು ಬರುವ ಭಕ್ತರಿಗೆ ಇಲ್ಲಿ ಹಲವು ಕುಟುಂಬಗಳು, ಮಹಿಳೆಯರು ಭಕ್ತಿಯಿಂದ ಅನ್ನದಾನ ಮಾಡುತ್ತಾರೆ. ಸದ್ಯ ಈ ಸಮಿತಿ ಸೇವೆಗೆ 16 ವರ್ಷ ತುಂಬಿದ ಸಂಭ್ರಮ.

ಆಲಮೇಲದ ದುಡಿಯುವ ವರ್ಗದ ಸಮಾನ ಮನಸ್ಕ ಗೆಳೆಯರು ಸೇರಿ 2004ರಲ್ಲಿ ಶ್ರೀಶೈಲಕ್ಕೆ ಈ ಮಾರ್ಗದಿಂದ ಪಾದಯಾತ್ರೆ ಮೂಲಕ ಹೋಗುವ ಭಕ್ತಾದಿಗಳಿಗೆ ದಾಸೋಹ (24 ಗಂಟೆ) ವ್ಯವಸ್ಥೆ ಮಲ್ಲಿಕಾರ್ಜುನ ಸೇವಾ ಸಮಿತಿಯಿಂದ ಆರಂಭವಾಯಿತು. ಅನ್ನ ಸಂತರ್ಪಣೆಯನ್ನು ಹೆಣ್ಣು, ಗಂಡು ಸೇರಿ ನಡೆಸುವುದು ಇಲ್ಲಿಯ ವಿಶೇಷ. ಈ ಸಮಿತಿಗೆ ಪದಾಧಿಕಾರಿಗಳಿಲ್ಲ, ಎಲ್ಲರೂ ಸದಸ್ಯರೇ. ಈ ಅನ್ನ ಸಂತರ್ಪಣೆಗೆ ಯಾವುದೇ ಜಾತಿ ಭೇದವಿಲ್ಲ. ಅನ್ನದಾನಕ್ಕೆ ಸರ್ವರ ಸಹಕಾರ ಮೊದಲ ವರ್ಷದಲ್ಲೇ ಸಿಕ್ಕಿತು. ಅದನ್ನು ಅಚ್ಚುಕಟ್ಟಾಗಿ ತಯಾರಿಸಿ ಬಡಿಸಲು ಸಮಿತಿ ಗೆಳೆಯರು ತಮ್ಮ ಕುಟುಂಬ ಸಮೇತರಾಗಿ ಟೊಂಕ ಕಟ್ಟಿ ನಿಂತಿದ್ದಾರೆ.

ಈಗಾಗಲೇ ಮಾ.5ರಂದು ಅನ್ನ ಸಂತರ್ಪಣೆ ಆರಂಭವಾಗಿದ್ದು, ಈ ಕಾರ್ಯಕ್ರಮಕ್ಕೆ ಆಸಂಗಿಹಾಳ ಆರೂಢ ಮಠದ ಶಂಕರಾನಂದ ಮಹಾರಾಜರು ಚಾಲನೆ ನೀಡಿದ್ದಾರೆ. ಮಾ.11ರ ವರೆಗೂ ಈ ಅನ್ನದಾಸೋಹ ಸೇವೆ ನಡೆಯಲಿದೆ. ಪಾದಯಾತ್ರೆ ನಡೆಸುವ ಭಕ್ತಾದಿಗಳಿಗೆ ಅನ್ನದಾನ ಮಾಡುವುದು ಪವಿತ್ರ ಕೆಲಸ ಎಂಬುದು ಈ ಗೆಳೆಯರ ನಂಬಿಕೆ. ವಾರಪೂರ್ತಿ ಇವರ ಠಿಕಾಣಿ ಇಲ್ಲಿಯೇ, ಮಡದಿ, ಮಕ್ಕಳ ಜತೆಗೆ ದಾಸೋಹ ಮನೆಗೆ ಬಂದು ಸಂತರ್ಪಣೆ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ದಾಸೋಹ ಮನೆಯಲ್ಲಿ ಕಸಗೂಡಿಸುವುದರಿಂದ ಹಿಡಿದು ಭಕ್ತರು ಉಂಡುಹೋದ ತಟ್ಟೆಗಳನ್ನು ತೊಳೆಯುವ ಕಾಯಕವನ್ನು ಚಾಚೂ ತಪ್ಪದೆ ಮಾಡುತ್ತಾರೆ.

ಇಲ್ಲಿ ನಿತ್ಯ ಮಹಾರಾಷ್ಟ್ರ ಸೇರಿ ಜಿಲ್ಲೆಯ ಬೇರೆ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸುತ್ತಾರೆ. ಬಂದ ಭಕ್ತರಿಗೆ ವಸತಿ ಹಾಗೂ ಪ್ರಸಾದ ವ್ಯವಸ್ಥೆ ಕಲ್ಪಿಸುವ ಅವಕಾಶ ತಮಗೆ ಸಿಕ್ಕ ಭಾಗ್ಯವಾಗಿದೆ. ಈ ಕಾಯಕವನ್ನು ಪ್ರತಿವರ್ಷ ತಪ್ಪದೆ ನಿರ್ವಹಿಸಿಕೊಂಡು ಹೋಗುತ್ತೇವೆ ಎಂದು ಅಶೋಕ ಸದ್ಲಾಪುರ, ಭೀಮಣ್ಣ ಗೋಲ್ಲರ, ಶಂಕರ ಮೇಸ್ತ್ರಿ ಸಿಂದಗಿ, ಶಂಕರಗೌಡ ಗಣಿಹಾರ, ಕರಣಸಿಂಗ್ ರಜಪೂತ, ಈರಣ್ಣ ಗಣಿಹಾರ, ಮಲ್ಲು ತಳವಾರ, ಬಸವರಾಜ ಕಾಳಶೆಟ್ಟಿ, ಶರಣಪ್ಪ ಗೊಲ್ಲರ, ಬಸವರಾಜ ತೊರವಿ ಹೇಳುತ್ತಾರೆ.

ಆ ಶ್ರೀಶೈಲ ಮಲ್ಲಿಕಾರ್ಜುನ ಕೃಪಾಶೀರ್ವಾದದಿಂದ ಪ್ರತಿ ವರ್ಷವೂ ಪಾದಯಾತ್ರಿಕರಿಗೆ ವಿಶೇಷವಾದ ಪ್ರಸಾದ ವ್ಯವಸ್ಥೆಯೊಂದಿಗೆ ನಮ್ಮ ಸೇವಾ ಸಮಿತಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಆ ಭಗವಂತ ನಮ್ಮ ಸೇವಾ ಸಮಿತಿ ಸದಸ್ಯರಿಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ಶಕ್ತಿ ನಿಡಲಿ.
ಸೋಮಣ್ಣ ಭಾಸಗಿ, ಶ್ರೀಶೈಲ ಮಲ್ಲಿಕಾರ್ಜುನ ಸೇವಾ ಸಮಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net