

ಹನೂರು : ತಾಲೂಕಿನ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಮಹದೇಶ್ವರರ ಭಾಗವಾದ ಆಲಂಬಾಡಿ ಜುಂಜೇಗೌಡರ ಜನ್ಮಸ್ಥಳ ಸಂಬಂಧಪಟ್ಟವರ ಇಚ್ಛಾಶಕ್ತಿಯ ಕೊರತೆಯಿಂದ ಅನಾಥವಾಗಿರುವುದು ಬೇಸರದ ಸಂಗತಿ ಎಂದು ಜನಪರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ ಮಹೇಶ ಚಿಕ್ಕಲ್ಲೂರು ತಿಳಿಸಿದರು.
ಜನಪರ ಸಾಹಿತ್ಯ ಪರಿಷತ್, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ಅಖಿಲ ಕರ್ನಾಟಕ ಕನಕ ಮತ್ತು ರಾಯಣ್ಣ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಭಾನುವಾರ ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಜುಂಜೇಗೌಡರು ಜನ್ಮ ತಾಳಿದ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದರು.
ಮ.ಬೆಟ್ಟದ ದೇಗುಲದ ಗರ್ಭಗುಡಿ, ಶ್ರೀಮಹದೇಶ್ವರಸ್ವಾಮಿ ಮೂರ್ತಿ ಸ್ಥಾಪಿಸಿರುವ ಪುಣ್ಯ ಪುರುಷ ಆಲಂಬಾಡಿ ಜುಂಜೇಗೌಡರ ಜನ್ಮ ಸ್ಥಳ ದುಸ್ಥಿತಿಯಲ್ಲಿರುವುದು ದುಃಖದ ವಿಚಾರ. ತಮಿಳುನಾಡಿನ ಗಡಿಯಲ್ಲಿರುವ ಈ ಪುಣ್ಯ ಸ್ಥಳದಲ್ಲಿ ಜುಂಜೇಗೌಡರು ಜನಿಸಿ ಸುಮಾರು 400 ರಿಂದ 600 ಎಕರೆ ಭೂ ಪ್ರದೇಶವನ್ನು ಆಳ್ವಿಕೆ ಮಾಡಿದ್ದರು. ಆದರೆ ಜುಂಜೇಗೌಡರು ನಿರ್ಮಿಸಿದ ರಂಗನಾಥಸ್ವಾಮಿ ದೇಗುಲ ಹಾಗೂ ಇವರ ಜನ್ಮಸ್ಥಳ ಅನಾಥವಾಗಿರುವುದು ವಿಷಾದನೀಯ. ಡಾ.ಪಿ.ಕೆ. ರಾಜಶೇಖರ್, ಡಾ.ಲಿಂಗದಹಳ್ಳಿ ಹಾಲಪ್ಪ ಹಾಗೂ ಇನ್ನು ಕೆಲವು ವಿದ್ವಾಂಸರ ಪ್ರಕಾರ ಜುಂಜೇಗೌಡರು ಕುರುಬ ಸಮುದಾಯದ ವ್ಯಕ್ತಿಯಾಗಿದ್ದು, ಆಲಂಬಾಡಿ ಗ್ರಾಮದಲ್ಲಿ ಬಂಗಲೆ, ಕೋಟೆ, ಶ್ರೀರಂಗನಾಥ ಸ್ವಾಮಿ, ದೇಗುಲ, ಮದ್ದು, ಗುಂಡುಗಳ ಶೇಖರಣೆಯ ಸುರಂಗ, ಮತ್ತು, ರತ್ನ ಹಾಗೂ ಬಂಗಾರವಿದ್ದ ಸ್ಥಳಗಳನ್ನು ಕಾಣಬಹುದಾಗಿದೆ. ಇವರ ಕಾಲದಲ್ಲಿ 7 ಸಾವಿರ ದನ ಕರುಗಳು, 7 ಸಾವಿರ ಮೇಕೆಗಳು ಹಾಗೂ ಕುದುರೆಯನ್ನು ಕಟ್ಟಿಹಾಕುವ ಕಲ್ಲಿನ ಕೊಟ್ಟಿಗೆಗಳು ಈ ಸ್ಥಳದಲ್ಲಿ ಇದ್ದವು. ಆದರೆ ಕುರುಹುಗಳು ಅವಸನದ ಅಂಚಿಗೆ ತಲುಪಿರುವುದು ಬೇಸರದ ಸಂಗತಿ. ಜತೆಗೆ ಈ ಗ್ರಾಮದಲ್ಲಿ ಅಗತ್ಯ ಮೂಲಸೌಕರ್ಯದ ಕೊರತೆ ಇರುವುದು ನಿಜಕ್ಕೂ ವಿಪರ್ಯಾಸ. ಆದ್ದರಿಂದ ಸರ್ಕಾರದ ಈ ಬಗ್ಗೆ ಗಮನಹರಿಸಿ ಅಭಿವೃದ್ಧಿ ಪಡಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನಕ ನೌಕರರ ಸಂಘದ ಅಧ್ಯಕ್ಷ ಎಚ್. ಬ್ರಹ್ಮಲಿಂಗಯ್ಯ, ಮಾಜಿ ಅಧ್ಯಕ್ಷ ರೇವಣ್ಣ, ಕಾರ್ಯದರ್ಶಿ ಅಶೋಕ್, ಪದಾಧಿಕಾರಿಗಳಾದ ಬಸವರಾಜು, ಮಹದೇವಸ್ವಾಮಿ, ಮಹೇಶ್, ಪುನೀತ್, ನಂಜುಂಡೇಗೌಡ ಹಾಗೂ ಇನ್ನಿತರರು ಇದ್ದರು.