

ಮುದ್ದೇಬಿಹಾಳ: ಈ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿರುವ ಆಲಮಟ್ಟಿ- ಮುದ್ದೇಬಿಹಾಳ- ತಾಳಿಕೋಟೆ- ಹುಣಸಗಿ- ಯಾದಗಿರಿ ರೈಲು ಮಾರ್ಗ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ನೆರವೇರುವಂತೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ತಾಳಿಕೋಟೆ ತಾಲೂಕಿನ ಆಲಮಟ್ಟಿ- ಯಾದಗಿರಿ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು, ಮುಖಂಡರು ಶಾಸಕ, ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರಿಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಮನವಿ ಸಲ್ಲಿಸಿದರು.
1930 ರಲ್ಲೇ ಆಗಿನ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡಿದ್ದ ಈ ರೈಲು ಮಾರ್ಗದ ಯೋಜನೆಗೆ 1933ರಲ್ಲಿ ಬ್ರಿಟಿಷ್ ಅಧಿಕಾರಿ- ದಿ ಗೈಡ್ ರೈಲ್ ರೋಡ್ ಫೀಡರ್ ಲೈನ್ಸ್ ಕಂಪನಿಯ ಎಂಡಿಯಾಗಿದ್ದ ಸಿ.ಸ್ಕೆಲ್ಟನ್ ನೇತೃತ್ವದಲ್ಲಿ ಮಂಡಳಿ ರಚಿಸಿ ಮಾರ್ಗದ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಅಂದು ಈ ಭಾಗದ ಜನ 100 ರೂ. ಮುಖಬೆಲೆಯ ಷೇರುಗಳನ್ನು ಖರೀದಿಸಿ ಸಂಪನ್ಮೂಲ ಒದಗಿಸಿದ್ದರು. ಆಗ 56,664 ರೂ. ಯೋಜನಾ ವೆಚ್ಚ ನಿಗದಿಪಡಿಸಲಾಗಿತ್ತು. ಆಲಮಟ್ಟಿಯಿಂದ 15 ಕಿ.ಮೀ. ಅಂತರದವರೆಗೆ ಮಾರ್ಗ ನಿರ್ಮಾಣ ಕಾರ್ಯ ನಡೆದಿತ್ತು. ಸ್ವಾತಂತ್ರೃ ಹೋರಾಟದ ತೀವ್ರತೆ ಹೆಚ್ಚಾಗಿದ್ದರಿಂದ ಸ್ಕೆಲ್ಟನ್ ಲಂಡನ್‌ಗೆ ಹಿಂತಿರುಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದ್ದು ಇಂದಿನವರೆಗೂ ಪ್ರಾರಂಭಗೊಂಡಿಲ್ಲ. ಆಲಮಟ್ಟಿಯಿಂದ ಹುಲ್ಲೂರವರೆಗೆ ಮಾರ್ಗದ ಪಳೆಯುಳಿಕೆ ಇಂದಿಗೂ ಕಂಡುಬರುತ್ತವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಭಾಗದ ಜನರ ಒತ್ತಾಯದ ಮೇರೆಗೆ 2011ರಲ್ಲಿ ಈ ಮಾರ್ಗಕ್ಕೆ ಮತ್ತೊಮ್ಮೆ ಸಮೀಕ್ಷೆ ನಡೆಸಲಾಯಿತಾದರೂ ಅದು ಕಾರಣಾಂತರಗಳಿಂದ ಸ್ಥಗಿತಗೊಂಡಿತು. ಈ ಯೋಜನೆ ಅನುಷ್ಠಾನದಿಂದ ಗೋವಾ, ಆಂಧ್ರಪ್ರದೇಶದ ವಿಜಯವಾಡ ಬಂದರ್‌ಗಳಿಗೆ ಕಡಿಮೆ ಸಮಯ, ವೆಚ್ಚದಲ್ಲಿ ಸರಕು, ಮಾನವ ಸಾಗಣೆಗೆ ಅನುಕೂಲವಾಗಲಿದೆ. ಈ ಭಾಗದ ಬೆಳೆಗಳ ರಫ್ತಿಗೂ ಹೆಚ್ಚಿನ ಅವಕಾಶ ಸಿಕ್ಕಂತಾಗುತ್ತದೆ. ಮುಂಬೈ, ಕಲ್ಯಾಣ ಕರ್ನಾಟಕದ ಪ್ರವಾಸಿ ತಾಣ, ವಾಣಿಜ್ಯ ಚಟುವಟಿಕೆಗೆ ಉತ್ತೇಜನ ದೊರೆತಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ, ಯಾದಗಿರಿ ಜಿಲ್ಲೆಯ ಹುಣಸಗಿ, ಸುರಪುರ, ಶಹಾಪುರ ಸೇರಿ 6 ತಾಲೂಕುಗಳಲ್ಲಿ ಬರುವ ಈ ಮಾರ್ಗದಿಂದ ಕೊಲ್ಹಾರ ಹತ್ತಿರದ ಎನ್‌ಟಿಪಿಸಿಗೆ ಅಗತ್ಯ ಕಲ್ಲಿದ್ದಲು ಪೂರೈಕೆ ಸರಳೀಕರಣಕ್ಕೆ ಅವಕಾಶ ದೊರಕುತ್ತದೆ. ಎನ್‌ಟಿಪಿಸಿಯ ಹಾರುಬೂದಿ ಸೇಡಂ, ವಾಡಿ, ಶಹಾಬಾದ್‌ಗಳಲ್ಲಿರುವ ಸಿಮೆಂಟ್ ಕಾರ್ಖಾನೆಗೆ ಬಳಸುವುದು ಸುಲಭವಾಗುತ್ತದೆ. ಭತ್ತದ ಕಣಜಗಳು, ಪುರಾತನ ವ್ಯಾಪಾರಿ ಕೇಂದ್ರಗಳು ಹೆಚ್ಚಿನ ಮಹತ್ವ ಪಡೆದು ಜನರ ಜೀವನಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲು ಅವಕಾಶಗಳಿವೆ ಎನ್ನುವುದೂ ಸೇರಿ ಹಲವು ಮಹತ್ವದ ಪ್ರಯೋಜನಗಳನ್ನು ಮನವಿಯಲ್ಲಿ ವಿವರಿಸಲಾಗಿದೆ.
ಮನವಿ ಸ್ವೀಕರಿಸಿದ ನಾಡಗೌಡರು ಈ ಯೋಜನೆ ಬಗ್ಗೆ ತಮಗೆ ಮಾಹಿತಿ ಇದ್ದು ತಾವು ಹಿಂದಿನ ಸರ್ಕಾರಗಳಲ್ಲಿ ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವಾಗ ಆಗಿನ ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತಂದು ಒತ್ತಾಯಿಸಿದ್ದನ್ನು ನೆನಪಿಸಿಕೊಂಡರು. ತಮ್ಮಿಂದ ಸಾಧ್ಯವಾಗುವ ಎಲ್ಲ ಪ್ರಯತ್ನಗಳನ್ನೂ ಮಾಡುವ ಭರವಸೆ ನೀಡಿದರು.
ಹೋರಾಟ ಸಮಿತಿಯ ಪ್ರಮುಖರಾದ ಶ್ರೀಕಾಂತ ಪತ್ತಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ (ಯಾಳಗಿ), ಸಿದ್ದನಗೌಡ ಪಾಟೀಲ ನಾವದಗಿ, ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ಪರಶುರಾಮ ತಂಗಡಗಿ, ಗಣ್ಯರಾದ ಪ್ರಭುಗೌಡ ಮದರಕಲ್ಲ, ಮಹಾಂತೇಶ ಮುರಾಳ, ವಿಜಯಸಿಂಗ್ ಹಜೇರಿ, ಎಂ.ಎಸ್.ಸರಶೆಟ್ಟಿ, ಎಂ.ಕೆ.ಚೋರಗಸ್ತಿ, ಸಂಗನಗೌಡ ಅಸ್ಕಿ, ಆರ್.ವಿ.ಜಾಲವಾದಿ, ಘನಶ್ಯಾಮ ಚವ್ಹಾಣ, ಕೆ.ಎಚ್.ಪಾಟೀಲ, ಸಂಗಮೇಶ ದೇಸಾಯಿ, ನೀಲಮ್ಮ ಪಾಟೀಲ, ಸಿಕಂದರ ಡೋಣಿ, ಯಾಜ್ ಉತ್ನಾಳ, ಗೋಪಾಲ ಕಟ್ಟಿಮನಿ, ಆಸ್ೀ ಕೆಂಭಾವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಇಲಿಯಾಸ್ ಬೋರಾಮಣಿ, ಜಿಲ್ಲಾ ಉಪಾಧ್ಯಕ್ಷ ಸದ್ದಾಂ ಕುಂಟೋಜಿ ಇತರರಿದ್ದರು.