

ಮುದ್ದೇಬಿಹಾಳ: ಈ ಭಾಗದ ದಶಕಗಳ ಬೇಡಿಕೆಯಾಗಿರುವ ಆಲಮಟ್ಟಿ- ಮುದ್ದೇಬಿಹಾಳ- ತಾಳಿಕೋಟೆ- ಹುಣಸಗಿ- ಯಾದಗಿರಿ ನೂತನ ರೈಲು ಮಾರ್ಗ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಲು, ರೈಲ್ವೆ ಸಚಿವರು, ಶಾಸಕರು, ಸಂಸದರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲು ಇಲ್ಲಿನ ಸಾರ್ವಜನಿಕ ವಾಚನಾಲಯದ ಸಭಾ ಭವನದಲ್ಲಿ ಶನಿವಾರ ನಡೆದ ರೈಲ್ವೆ ಹೋರಾಟ ಸಮಿತಿ ಮುಖಂಡರ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಳಿಕೋಟೆ ಹೋರಾಟ ಸಮಿತಿ ಪರವಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಚಾರ್ಯ ಆರ್.ವಿ.ಜಾಲವಾದಿ ಅವರು ಇದುವರೆಗೆ ರೈಲು ಮಾರ್ಗಕ್ಕಾಗಿ ನಡೆಸಿರುವ ಪ್ರಯತ್ನಗಳು, ಸಲ್ಲಿಸಿರುವ ಮನವಿ ಸೇರಿ ಹಲವು ಮಹತ್ವದ ಮಾಹಿತಿ ಹಂಚಿಕೊಂಡು ಈ ಮಾರ್ಗವನ್ನು ಕೇಂದ್ರ ಸರ್ಕಾರ ೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿಯೇ ಘೋಷಣೆ ಆಗುವಂತೆ ಆಲಮಟ್ಟಿಯಿಂದ ಹಿಡಿದು ಯಾದಗಿರಿವರೆಗೂ ಇರುವ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕುವುದರ ಜೊತೆಗೆ ಮಾರ್ಗದುದ್ದಕ್ಕೂ ಬರುವ ಹಳ್ಳಿ, ಪಟ್ಟಣ, ನಗರ ಪ್ರದೇಶದಲ್ಲಿ ಸಂಘಟನೆ ಬಲಪಡಿಸಲು ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ಆಲಮಟ್ಟಿ- ಮುದ್ದೇಬಿಹಾಳ- ಯಾದಗಿರಿ ರೈಲ್ವೆ ಹೋರಾಟ ಸಮಿತಿ ಸಂಚಾಲಕ ಬಸಯ್ಯ ನಂದಿಕೇಶ್ವರಮಠ ಮಾತನಾಡಿ, ದಶಕಗಳ ಹಿಂದಿನಿಂದಲೇ ಮುದ್ದೇಬಿಹಾಳದಲ್ಲಿ ಈ ಹೋರಾಟ ನಡೆದಿದೆ. ಈಗ ನಮಗೆ ಅವಕಾಶ ಲಭಿಸಿದ್ದು ಮತ್ತೆ ಧ್ವನಿ ಎತ್ತಬೇಕಾಗಿದೆ. ಇದಕ್ಕಾಗಿ ಆಲಮಟ್ಟಿಯಿಂದ ಯಾದಗಿರಿವರೆಗೆ ಜನ ಜಾಗೃತಿ ಜಾಥಾ ನಡೆಸುವ ಕುರಿತು ಎಲ್ಲರೂ ಚಿಂತಿಸಬೇಕು. ಸಾರ್ವಜನಿಕರಿಂದಲೇ ಪಟ್ಟಿ ಸಂಗ್ರಹಿಸಿ ಅವರ ಸಹಭಾಗಿತ್ವ ಪಡೆದುಕೊಳ್ಳಬೇಕು. ಈ ಬಾರಿಯ ಹೋರಾಟ ಮಾಡು ಇಲ್ಲವೇ ಮಡಿ ಎನ್ನುವಂತಿರಬೇಕು ಎಂದರು.
ಸಮಿತಿಯ ಹಿರಿಯ ಮುಖಂಡ ಬಾಬು ಬಿರಾದಾರ ಮಾತನಾಡಿ, ಈ ಹಿಂದೆ ನಡೆಸಿದ ಹೋರಾಟ, ಈಗಿನ ಎಐಸಿಸಿ ಅಧ್ಯಕ್ಷ- ಆಗಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದನ್ನು ನೆನಪಿಸಿಕೊಂಡು ಈ ಹೋರಾಟಕ್ಕೆ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟಿದ್ದ ಮುದ್ದೇಬಿಹಾಳದ ಮುಲ್ಲಾ ಮಾಸ್ತರ ಅವರಿಂದಾಗಿಯೇ ಹೋರಾಟ ಇಂದಿಗೂ ಜೀವಂತವಾಗಿದೆ.ಸಂಘಟನಾತ್ಮಕ ಪ್ರಯತ್ನಗಳು ಬೇಕು ಎಂದರು.
ಹುಬ್ಬಳ್ಳಿಯ ಚೇಂಬರ್ ಆ್ ಕಾಮರ್ಸ್‌ನ ಸದಸ್ಯ ಅಶೋಕ ರೇವಡಿ ಮಾತನಾಡಿ, ಈಗಾಗಲೇ ಈ ವಿಷಯವನ್ನು ಚೇಂಬರ್ ಅಧ್ಯಕ್ಷರು, ಪದಾಧಿಕಾರಿಗಳ ಗಮನಕ್ಕೆ ತಂದಿದ್ದು ಅವರು ಕೂಡ ಈ ಬಗ್ಗೆ ಸಂಬಂಧಿಸಿದವರಿಗೆ ಪತ್ರ ಬರೆದು ಬೆಂಬಲಿಸುವ ಭರವಸೆ ನೀಡಿದ್ದಾರೆ. ಹೋರಾಟ ಸಮಿತಿಯವರು ಒಪ್ಪಿದರೆ ಒಂದು ಬಾರಿ ಚೇಂಬರ್ ಅಧ್ಯಕ್ಷರು, ಪದಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನೆರವಾಗುತ್ತೇನೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಎಪಿಎಂಸಿ ಅಡತ್ ವ್ಯಾಪಾರಸ್ಥರ ಸಂಘದ ಬಿ.ಎಸ್.ಮೇಟಿ, ಧುರೀಣೆ ಕಾಶಿಬಾಯಿ ರಾಂಪೂರ, ಹಿರಿಯ ಪತ್ರಕರ್ತ ಡಿ.ಬಿ.ವಡವಡಗಿ, ಚಿಂತಕ ಅರವಿಂದ ಕೊಪ್ಪ, ಬಸನಗೌಡ ಪಾಟೀಲ ಸರೂರ, ಉದಯಸಿಂಗ ರಾಯಚೂರ, ನಿವೃತ್ತ ಸೈನಿಕ ಎಸ್.ಬಿ.ಹೊಳಿ, ಕಿರಣಗೌಡ ಪಾಟೀಲ, ಮಹೇಶ ಕಲ್ಯಾಣಮಠ, ಅರವಿಂದ ಲದ್ದಿಮಠ, ರಾಜೇಂದ್ರಗೌಡ ರಾಯಗೊಂಡ, ವೇದಿಕೆಯ ಸಹ ಸಂಚಾಲಕ ರವೀಂದ್ರ ನಂದೆಪ್ಪನವರ ಇನ್ನಿತರರು ಮಾತನಾಡಿ ಅಭಿಪ್ರಾಯ ಹಂಚಿಕೊಂಡರು.
ಪಟ್ಟಣದ ವರ್ತಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿ ಹಲವರು ಪಾಲ್ಗೊಂಡು ಹೋರಾಟಕ್ಕೆ ಕೈಜೋಡಿಸುವ ವಾಗ್ದಾನ ಮಾಡಿದರು.