

ಕೇಶವಮೂರ್ತಿ ವಿ.ಬಿ. ಹಾವೇರಿ
ಆಲದಕಟ್ಟಿ ಗ್ರಾಮದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಘಟನೆಯ ಆಘಾತದಿಂದ ಇನ್ನೂ ಹೊರ ಬಂದಿಲ್ಲ. ಅಂಗಡಿ ಮಾಲೀಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಂದಲೇ ಘಟನೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಪಟಾಕಿ ದುರಂತದ ಸಂದರ್ಭದಲ್ಲಿ ಮೂರ್ಛೆ ಹೋಗಿ ಆಸ್ಪತ್ರೆಗೆ ದಾಖಲಾಗಿರುವ ಗೋದಾಮಿನ ಪಕ್ಕದ ಮನೆಯ ಮಹಿಳೆ ಕಲಾವತಿ ಕೆ.ಎಸ್. ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಸಣ್ಣ ಪಟಾಕಿ ಅಂಗಡಿ ನಡೆಸಿಕೊಂಡು ಹೋಗುತ್ತಾರೆಂದು ಸುಮ್ಮನಿದ್ದರೆ, ದಿನದಿಂದ ದಿನಕ್ಕೆ ಇವರ ಪಟಾಕಿ ಸಂಗ್ರಹ ಹೆಚ್ಚಾಗ ತೊಡಗಿತು. ಪಟಾಕಿ ಲೋಡ್ ಬಂದಾಗಲೊಮ್ಮೆ ರಸ್ತೆಬದಿ ಹತ್ತಾರು ಬಾಕ್ಸ್ ಸ್ಯಾಂಪಲ್ ಹೊತ್ತಿಸಿ, ಜನರಿಗೆ ತೊಂದರೆ ಕೊಡುತ್ತಿದ್ದರು. ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದಲೇ ದುರ್ಘಟನೆ ನಡೆದು ಹೋಯಿತು ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಅವಘಡದಿಂದಾಗಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ನಮ್ಮ ಕಷ್ಟ ಯಾರೂ ಆಲಿಸುತ್ತಿಲ್ಲ. 1997ರಲ್ಲೇ ಆಲದಕಟ್ಟಿ ಗ್ರಾಮದಲ್ಲಿ ಹಾವೇರಿ- ಹಾನಗಲ್ಲ ರಸ್ತೆ ಬದಿಯಲ್ಲೇ ನಮ್ಮ ತಂದೆ, ಸಹೋದರ ಮನೆ ನಿರ್ವಿುಸಿದ್ದರು. ಮೂರು ವರ್ಷಗಳ ಹಿಂದೆ ಹೋಟೆಲ್, ಅಂಗಡಿ ಆರಂಭಿಸುತ್ತೇವೆ ಎಂದು ಸುಳ್ಳು ಹೇಳಿ ನಮ್ಮ ಮನೆಯ ಪಕ್ಕದಲ್ಲೇ ಪಟಾಕಿ ಅಂಗಡಿ ಆರಂಭಿಸಿದ್ದರು. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರೂ ಯಾರೂ ಸ್ಪಂದಿಸಲಿಲ್ಲ ಎಂದು ಕಲಾವತಿ ಅಳಲು ತೋಡಿಕೊಡಿದ್ದಾರೆ.
ಆ. 29ರಂದು ಈ ದುರಂತ ನಡೆದಾಗ ಮನೆಯಲ್ಲಿ ಒಬ್ಬಳೇ ಇದ್ದೆ. ಏಕಾಏಕಿ ಪಟಾಕಿ ಸದ್ದು ಕೇಳಿ, ಮನೆತುಂಬ ಹೊಗೆ ಆವರಿಸಿತು. ಏನೂ ಕಾಣದಂತಾಗಿ ಮೂರ್ಛೆ ಬಂದು ಬಿದ್ದುಬಿಟ್ಟೆ. ಬಳಿಕ ಎದುರಿನ ಮನೆಯವರು, ಇತರರು ಬಂದು ಜೀವ ಉಳಿಸಿದ್ದಾರೆ. ಒಂದು ವೇಳೆ ವಯಸ್ಸಾದ ತಂದೆ, ಚಿಕ್ಕ ಮಗು ಮನೆಯಲ್ಲಿದ್ದಿದ್ದರೆ ನಮ್ಮ ಕುಟುಂಬದ ಪರಿಸ್ಥಿತಿ ಏನಾಗುತ್ತಿತ್ತು ಎಂದು ಕಲಾವತಿ ಕಣ್ಣೀರು ಹಾಕಿದರು.
ಅಸ್ವಸ್ಥಳಾಗಿದ್ದ ಕಲಾವತಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರೂ ಪೊಲೀಸರು ಈಕೆಯನ್ನು ಗಾಯಾಳು ಎಂದು ಪರಿಗಣಿಸಿಲ್ಲ. ಗ್ರಾಮ ಪಂಚಾಯಿತಿಯವರು ಬಿಟ್ಟರೆ ಯಾರೂ ನೋಡಲೂ ಬಂದಿಲ್ಲ. ಮನೆಯ ಗೋಡೆಗಳು ಹಲವೆಡೆ ಬಿರುಕು ಬಿಟ್ಟಿದ್ದು, ಪರಿಹಾರದ ಬಗ್ಗೆಯೂ ಯಾರೂ ಮಾತನಾಡುತ್ತಿಲ್ಲ. ಸರ್ಕಾರ ನಮಗೆ ನ್ಯಾಯ ದೊರಕಿಸಿಕೊಡಬೇಕು. ಪಟಾಕಿ ಅಂಗಡಿಯ ಮತ್ತೆ ಆರಂಭವಾಗದಂತೆ ಕ್ರಮ ಜರುಗಿಸಬೇಕು ಎಂದು ಕಲಾವತಿಯ ಸಹೋದರ ಮಹಾಂತೇಶ ಅಂಗಡಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ನಮ್ಮ ಊರಿನ ಜನ ಎಂದೂ ಇಂತಹ ಘಟನೆ ನೋಡಿರಲಿಲ್ಲ. ಎಲ್ಲರಲ್ಲೂ ಭಯ, ದುಗುಡ ಸೃಷ್ಟಿಯಾಗಿದೆ. ಯಾವಾಗ ಏನಾಗುತ್ತೋ ಎಂಬ ಆತಂಕ ಉಂಟಾಗಿದೆ. ನಮ್ಮ ಗ್ರಾಮದಲ್ಲಿ ಪಟಾಕಿ ಅಂಗಡಿ ಬೇಡವೇ ಬೇಡ. ಅಧಿಕೃತ, ಅನಧಿಕೃತ ಎಲ್ಲ ಅಂಗಡಿಯನ್ನು ಪರಿಶೀಲಿಸಿ ಊರಿಂದ ಹೊರಗೆ ಸ್ಥಳಾಂತರಿಸಬೇಕು. ಇಂತಹ ಯಾವುದೇ ಸ್ಪೋಟಕ ಅಂಗಡಿ, ಗೋದಾಮು ಆರಂಭಿಸುವ ಮುನ್ನ ಪಂಚಾಯಿತಿ ಮತ್ತು ಜನರ ಸಭೆ ನಡೆಸಿ ಅನುಮತಿ ಪಡೆಯುವಂತೆ ನಿಯಮ ರೂಪಿಸಬೇಕು. | ಶಿವಯೋಗಿ ವಾರ್ತಿ, ಚಂದ್ರಶೇಖರ ಅಗಡಿ, ಆಲದಕಟ್ಟಿ ಗ್ರಾಮಸ್ಥರು