

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಏ.30ರಂದು ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ ಜಿಲ್ಲೆಯ ಧಾರ್ಮಿಕ ಸ್ಥಳಗಳು ಹಾಗೂ ಇನ್ನಿತರ ಕಲ್ಯಾಣ ಮಂಟಪಗಳ ಕಡೆ ಹೆಚ್ಚಿನ ನಿಗಾವಹಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಮೇಲೆ ನಿಗಾವಹಿಸಿದೆ.
ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ, ಮಧುರೆ ದೇವಸ್ಥಾನ, ನೆಲಮಂಗಲದ ಶಿವಗಂಗೆ, ದೇವಹಳ್ಳಿ ತಿಮ್ಮರಾಯಸ್ವಾಮಿ ಬೆಟ್ಟ(ಅವತಿ) ಹಾಗೂ ಹೊಸಕೋಟೆ ಶ್ರೀ ಕಾಳಬೈರವ ದೇವಸ್ಥಾನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿಯ ಮದ್ದೂರಮ್ಮ ದೇವಸ್ಥಾನ ಸೇರಿ ಇನ್ನು ಕೆಲವು ದೇವಸ್ಥಾನಗಳ ಆಡಳಿತ ಮಂಡಳಿ ಹಾಗೂ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದು, ಇಂಥ ಸನ್ನಿವೇಶದ ಬಗ್ಗೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದೆ.
ಜಿಲ್ಲೆಯಲ್ಲಿ ಪ್ರಕರಣ ಕಂಡುಬಂದಿಲ್ಲ: ಸಾಮಾನ್ಯವಾಗಿ ಅಕ್ಷಯ ತೃತೀಯ ದಿನದಂದು ರಾಜಸ್ಥಾನ ಸೇರಿ ಉತ್ತರ ಭಾರತದ ಕಡೆ ಮದುವೆ ಮಾಡುವ ಸಂಪ್ರದಾಯ ಹೆಚ್ಚಿದೆ. ಅಲ್ಲದೆ ಆ ಭಾಗಗಳಲ್ಲಿ ಬಾಲ್ಯವಿವಾಹಗಳು ನಡೆಯುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದರೆ ಕರ್ನಾಟಕ ಸೇರಿ ದಕ್ಷಿಣ ಭಾಗಗಳಲ್ಲಿ ಇಂಥ ಪ್ರಕರಣಗಳು ತೀರ ವಿರಳ, ಗ್ರಾಮಾಂತರ ಜಿಲ್ಲೆಯಲ್ಲಿ ಅಕ್ಷಯ ತೃತೀಯ ದಿನದಂದು ಬಾಲ್ಯವಿವಾಹ ನಡೆದಂತ ಪ್ರಕರಣಗಳು ಇದುವರೆಗೆ ದಾಖಲಾಗಿಲ್ಲ. ಆದರೂ ಜಿಲ್ಲಾಡಳಿತದ ಸೂಚನೆ ಮೇರೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆಗಳ ಕಣ್ಗಾವಲು: ಶುಭಸಮಾರಂಭಗಳಿಗೆ ಅತ್ಯಂತ ಪ್ರಶಸ್ತ ದಿನವೆನಿಸಿರುವ ಅಕ್ಷಯ ತೃತೀಯ ದಿನದಂದು ನಡೆಯಲಿರುವ ಮದುವೆ ಸಮಾರಂಭಗಳಲ್ಲಿ ಬಾಲ್ಯವಿವಾಹ ನಡೆಯುವ ಸಾಧ್ಯತೆ ಬಗ್ಗೆ ಎಚ್ಚರಿಕೆ ವಹಿಸಿರುವ ಜಿಲ್ಲಾಡಳಿತ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿಗಾ ವಹಿಸುವಂತೆ ತಾಕೀತು ಮಾಡಿದೆ. ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಸಾಮೂಹಿಕ ವಿವಾಹಗಳು ಆಯೋಜನೆಯಾಗಲಿದ್ದು, ಇಂಥ ಕಾರ್ಯಕ್ರಮಗಳಲ್ಲಿ ಬಾಲ್ಯವಿವಾಹ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದೇವಸ್ಥಾನಗಳ ಮೇಲೆ ಕಣ್ಗಾವಲಿರಿಸಿದೆ.
ನೋಂದಣಿ ಪರಿಶೀಲನೆ: ಈಗಾಗಲೇ ಅಧಿಕೃತವಾಗಿ ನೋಂದಣಿಯಾಗಿರುವ ಸಾಮೂಹಿಕ ವಿವಾಹಗಳ ಬಗ್ಗೆ ವರದಿ ಪಡೆದು ಇಲಾಖೆ ಪರಿಶೀಲನೆ ನಡೆಸಲಿದೆ. ಅಲ್ಲದೆ ಸಾಮೂಹಿಕ ಕಾರ್ಯಕ್ರಮ ನಡೆಯುವ ವೇಳೆ ಇಲಾಖೆಯ ಅಧಿಕಾರಿಗಳು ಖುದ್ದು ಹಾಜರಿರುವಂತೆ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ. ಇನ್ನು ಅಧಿಕೃತವಾಗಿ ನೋಂದಣಿ ಮಾಡದೆ ದೇಗುಲಗಳಲ್ಲಿ ದಿಢೀರ್ ಸಾಮೂಹಿಕ ವಿವಾಹ ಏರ್ಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಮುಖ ದೇಗುಲಗಳ ಮೇಲೆ ಕಣ್ಣಿಡುವಂತೆ ಸೂಚನೆ ನೀಡಿದೆ.
18-21 ರೊಗಳಗಿನ ಮದುವೆ: 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದೊಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಲಾಗುವುದು. ಈ ಕಾಯ್ದೆಯಡಿ ಪ್ರತಿ ಪೊಲೀಸ್ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿಯಡಿ ಬಾಲ್ಯವಿವಾಹ ಜರುಗುತ್ತಿರುವ ಮಾಹಿತಿ ಬಂದಾಗ ಸ್ವಪ್ರೇರಿತವಾಗಿ ದೂರು ದಾಖಲು ಮಾಡಲು ಅವಕಾಶವಿರುತ್ತದೆ.
ಬಾಲ್ಯವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುಟುಂಬ ವರ್ಗವನ್ನೂ ತಪ್ಪಿತಸ್ಥರು ಎಂದು ಕಾಯ್ದೆಯಡಿ ಕೇಸ್ ದಾಖಲಿಸಲಾಗುವುದು, ಕಾಯ್ದೆಯ ಪ್ರಕಾರ ಒಂದು ವರ್ಷಕ್ಕೆ ಕಡಿಮೆಯಿಲ್ಲದ ಅಂದರೆ ಎರಡು ವರ್ಷಗಳ ಕಾಲ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಗೆ ಅಥವಾ ಇವರೆಡರನ್ನು ಅನ್ವಯಿಸಲಾಗುವುದು.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ
ಅಕ್ಷಯ ತೃತೀಯ ದಿನದಂದು ಸಾಮೂಹಿಕ ವಿವಾಹಗಳಲ್ಲಿ ಬಾಲ್ಯ ವಿವಾಹ ನಡೆದಂತ ಪ್ರಕರಣಗಳು ಇದುವರೆಗೆ ಜಿಲ್ಲೆಯಲ್ಲಿ ಎಲ್ಲಿಯೂ ಕಂಡುಬಂದಿಲ್ಲ. ಆದರೂ ಜಿಲ್ಲಾಡಳಿತ ಆದೇಶದ ಮೇರೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಾಗಿದೆ. ಜಿಲ್ಲೆಯ ಪ್ರಮುಖ ದೇಗುಲಗಳ ಮುಖ್ಯಸ್ಥರಿಗೆ ಸುತ್ತೋಲೆ ನೀಡಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಎಲ್ಲಿಯಾದರೂ ಇಂಥ ಪ್ರಕರಣ ನಡೆಯುವ ಸಾಧ್ಯತೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಅನಿತಾಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ