

ಮಂಗಳೂರು : ಸ್ವಾಮಿ ವಿವೇಕಾನಂದರು ಭಾರತದ ಮಾನವೀಯತೆಯ ಹಾಗೂ ಪ್ರಜ್ಞೆಯ ಶಾಶ್ವತ ಬೆಳಕಾಗಿ ಉಳಿದಿದ್ದಾರೆ. ಇಡೀ ವಿಶ್ವಕ್ಕೆ ಭಾರತೀಯ ತತ್ವಜ್ಞಾನ ಮತ್ತು ಸನಾತನ ಧರ್ಮದ ಮಹತ್ವವನ್ನು ಪರಿಚಯಿಸಿದ ಈ ಮಹಾನ್ ಯೋಗಿ, ತನ್ನ ಸಂದೇಶಗಳಿಂದ ಜನರ ಮನಸ್ಸಿನಲ್ಲಿ ಹೊಸ ಹುಮ್ಮಸ್ಸು ಉಂಟುಮಾಡಿದ್ದರು ಎಂದು ಕಾರ್ಕಳದ ಉಪನ್ಯಾಸಕಿ ಅಕ್ಷಯಾ ಗೋಖಲೆ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ವತಿಯಿಂದ ನಗರದ ತ್ರಿಶಾ ಕಾಲೇಜ್ ಆಫ್
ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಜರಗಿದ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಹಾ ಬೆಳಕು ಸ್ವಾಮಿವಿವೇಕಾನಂದರ ಜೀವನ - ಸಂದೇಶ ವಿಷಯದ ಕುರಿತು ಮಾತನಾಡಿದರು.
ಸ್ವಾಮಿ ವಿವೇಕಾನಂದರು ದೈವಸಾಕ್ಷಾತ್ಕಾರವನ್ನು ಮಾತ್ರವಲ್ಲ, ಮಾನವ ಸೇವೆಯನ್ನು ಸಹ ಪ್ರಧಾನ ಧರ್ಮವೆಂದು ಸಾರಿದರು.
ಅವರ ದೃಷ್ಟಿಕೋನ ನಮಗೆ ಸಹಾನುಭೂತಿ, ಸಹಬಾಳ್ವೆ ಮತ್ತು ಜಗತ್ತಿಗೆ ಒಗ್ಗಟ್ಟಿನ ಸಂದೇಶವನ್ನು ನೀಡುತ್ತದೆ ಎಂದು ಅವರು ಹೇಳಿದರು.
ತ್ರಿಶಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಂಜುನಾಥ ಕಾಮತ್ ಎಂ, ತ್ರಿಶಾ ಸಂಧ್ಯಾ ಕಾಲೇಜಿನ ಪ್ರೊ. ಸುಪ್ರಭಾ ಎಂ, ತ್ರಿಶಾ ಸಮೂಹ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ್ ಕಾಯರ್ ಕಟ್ಟೆ, ತ್ರಿಶಾ ಕ್ಲಾಸೆಸ್ ಮಂಗಳೂರಿನ ಮುಖ್ಯಸ್ಥೆ ಪ್ರೊ. ಯಶಸ್ವಿನಿ
ಯಶಪಾಲ್, ಕಾರ್ಯಕ್ರಮ ಸಂಯೋಜಕಿ ಪ್ರೊ. ನಮೃತಾ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಪ್ರೊ.ವಿದ್ಯಾಲಕ್ಷ್ಮಿ ವಂದಿಸಿದರು. ವಿದ್ಯಾರ್ಥಿನಿ ಇಂಚರ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.