

ಪಾಂಡವಪುರ: ತಾಲೂಕಿನ ಚಿಕ್ಕಾಡೆ ಗ್ರಾಪಂ ಅಧ್ಯಕ್ಷರಾಗಿ ರೈತಸಂಘ ಮತ್ತು ಕಾಂಗ್ರೆಸ್ ಬೆಂಬಲಿತ ದೇವೇಗೌಡನಕೊಪ್ಪಲು ಅಕ್ಷತಾ ಅರವಿಂದ್ ಸೋಮವಾರ ಚುನಾಯಿತರಾದರು.
ಒಟ್ಟು 15 ಸದಸ್ಯ ಬಲ ಹೊಂದಿರುವ ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರು 8 ಹಾಗೂ ರೈತ ಸಂಘ ಮತ್ತು ಕಾಂಗ್ರೆಸ್ ಬೆಂಬಲಿತ 7 ಸದಸ್ಯರು ಆಯ್ಕೆಯಾಗಿದ್ದಾರೆ. ಈ ಹಿಂದಿನ ಎಲ್ಲ ಅಧ್ಯಕ್ಷರ ಚುನಾವಣೆಗಳಲ್ಲೂ ಜೆಡಿಎಸ್ ಬೆಂಬಲಿತರು ಗ್ರಾಪಂ ಅಧ್ಯಕ್ಷಗಾದಿಗೆ ಚುನಾಯಿತರಾಗಿದ್ದರು. ಆದರೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ರೈತಸಂಘ ಮತ್ತು ಕಾಂಗ್ರೆಸ್ ಬೆಂಬಲಿತ ಮೈತ್ರಿಕೂಟ ಅಭ್ಯರ್ಥಿ ಅಕ್ಷತಾ ಅರವಿಂದ್ ಅವರು ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಅಧಿಕಾರ ಒಡಂಬಡಿಕೆ ಹಿನ್ನೆಲೆಯಲ್ಲಿ ಈ ಹಿಂದಿನ ಅಧ್ಯಕ್ಷೆ ಅನಿತಾ ರಾಮಲಿಂಗೇಗೌಡ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಪ್ರಕ್ರಿಯೆ ಮುಗಿದ ಅಭ್ಯರ್ಥಿ ಅಕ್ಷತಾ ಅರವಿಂದ್ ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿರುವುದಾಗಿ ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.
ಸಂಭ್ರಮಾಚರಣೆ: ಚುನಾವಣಾ ಫಲಿತಂಶ ಬಳಿಕ ಕಾಂಗ್ರೆಸ್ ಮತ್ತು ರೈತಸಂಘ ಕಾರ್ಯಕರ್ತರು ಮತ್ತು ಬೆಂಬಲಿತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮ ಆಚರಿಸಿದರು. ರೈತ ಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಮುಖಂಡರಾದ ಚಿಕ್ಕಾಡೆ ವಿಜೇಂದ್ರ, ಹರೀಶ್, ರಘು, ಶರತ್, ಜಗದೀಶ್, ರವಿ, ಟಿಎಪಿಸಿಎಎಸ್ ನಿರ್ದೇಶಕ ಶ್ರೀಕಾಂತ್ ಇತರರು ಇದ್ದರು.