ಸಕ್ಕರೆನಾಡಿನ ಅಕ್ಷರಜಾತ್ರೆ ಪ್ಲಾಸ್ಟಿಕ್ ಮುಕ್ತ: ಪೇಪರ್ ಲೋಟ ಬಳಕೆಗೆ ತೀರ್ಮಾನ

Mla-Ramesha-bandisiddegowda
Published on

ಮಂಡ್ಯ: ನಗರದ ಹೊರವಲಯದಲ್ಲಿ ಡಿ.20ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ಲಾಸ್ಟಿಕ್ ಮುಕ್ತವಾಗಿರಲಿದೆ. ಈ ಸಂಬಂಧ ಆಹಾರ ಸಮಿತಿಯಿಂದ ಕೆಲ ಕ್ರಮ ತೆಗೆದುಕೊಳ್ಳಲಾಗಿದೆ.

ಇತ್ತೀಚಿನ ವರ್ಷದಲ್ಲಿ ಯಾವುದೇ ಕಾರ್ಯಕ್ರಮವಾದರೂ ಪ್ಲಾಸ್ಟಿಕ್ ಬಾಟಲಿ ಬಳಕೆ ಕಡ್ಡಾಯ ಎನ್ನುವಂತಾಗಿದೆ. ಆದರೆ ನುಡಿಜಾತ್ರೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ತೀರ್ಮಾನ ಮಾಡಲಾಗಿದೆ. ಅದರಂತೆ ಪೇಪರ್ ಲೋಟ ಬಳಸಲಾಗುತ್ತಿದೆ. ಕುಡಿಯವ ನೀರನ್ನು ಪ್ರತಿನಿತ್ಯ ತಜ್ಙರು ಪರೀಕ್ಷೆಗೆ ಒಳಪಡಿಸಲಿದ್ದಾರೆ. ಬಳಿಕ ಪ್ರತಿ 5 ಕೌಂಟರ್‌ಗೆ 5 ಪ್ರತ್ಯೇಕ 20 ಲೀಟರ್ ಬಾಟಲಿಯಲ್ಲಿ ತುಂಬಿಸಿ ಪೇಪರ್ ಲೋಟದ ಮೂಲಕ ಬಳಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ನಿರ್ವಹಣೆಗೆಂದು ಪ್ರತ್ಯೇಕ ಸಮಿತಿ ಕೆಲಸ ನಿರ್ವಹಿಸಲಿದೆ.

ಇದಲ್ಲದೆ ಕನ್ನಡದ ಕಂಪಿನೊಂದಿಗೆ ನಾಲಗೆಗೂ ರುಚಿ ರುಚಿಯಾದ ಭೊರಿಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಶೈಲಿಯಲ್ಲಿ ಬಗೆಗಿನ ತಿಂಡಿ, ತಿನಿಸಿನಿಂದ ಕೂಡಿದ ಊಟದ ವ್ಯವಸ್ಥೆಗೆ ಸಿದ್ಧತೆ ಕಾರ್ಯಗಳು ಭರದಿಂದ ಸಾಗುತ್ತಿದೆ. ಗಣ್ಯವ್ಯಕ್ತಿಗಳು, ನೋಂದಾಯಿತ ಪ್ರತಿನಿಧಿಗಳು, ಸಾರ್ವಜನಿಕರು, ಸ್ವಯಂ ಸೇವಕರು, ಮಾಧ್ಯಮ ಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿ ಸೇರಿದಂತೆ ಅಂದಾಜು ಮೂರು ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಅಂದಾಜು 300 ಕೌಂಟರ್ ವ್ಯವಸ್ಥೆ ಮಾಡಲಾಗುತ್ತಿದೆ.

ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಉಪಹಾರ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. 350 ಜನ ಬಾಣಸಿಗರು 900 ಜನ ಬಡಿಸುವವರು ಮತ್ತು ಅಡುಗೆ ಸ್ವಚ್ಚತೆಗೆ ಸಂಬಂಧಿಸಿದಂತಹ ಕಾರ್ಮಿಕರು ಮೂರು ದಿನಗಳ ನಿರಂತರ ಕೆಲಸವನ್ನು ಮಾಡಲಿದ್ದಾರೆ. ಮುಖ್ಯವಾಗಿ ರುಚಿ, ಶುಚಿಯಾದಂತಹ ಉಟವನ್ನ ಸಿದ್ದಪಡಿಸಲು ಸೂಚನೆ ನೀಡಲಾಗಿದೆ. ಕೌಂಟರ್ ನಿರ್ವಹಣೆ, ಉಸ್ತುವಾರಿ ಸಂಬಂಧ ಪ್ರತಿ ಕೌಂಟರ್‌ಗೆ ಒಬ್ಬರು ಎಸ್‌ಡಿಎ ದರ್ಜೆ ಸಿಬ್ಬಂದಿ, ಪ್ರತಿ 5 ಕೌಂಟರ್‌ಗೆ ಸಿ ಗ್ರೂನ್ ಅಧಿಕಾರಿಯಂತೆ 60 ಜನ ಪಿಡಿಒ ಹಾಗೂ ಪ್ರತಿ 50 ಕೌಂಟರ್‌ಗೆ ಎಡಿ ಮಿಡ್ಡೆ ಮಿಲ್ಸ್ ಅಧಿಕಾರಿ, ಪ್ರತಿ 100 ಕೌಂಟರ್‌ಗೆ 3 ಜನ ಜಿಲ್ಲಾಮಟ್ಟದ ಅಧಿಕಾರಿಯನ್ನು ನೇಮಿಸಲಾಗಿದೆ. ಇವರ ಜತೆಗೆ ಪ್ರತಿ ಕೌಂಟರ್‌ಗೆ ಒಬ್ಬರಂತೆ ಸ್ವಯಂ ಸೇವಕರ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅಂದಾಜು 400 ಜನ ಸ್ವಯಂ ಸೇವಕರನ್ನ ವಿವಿಧ ಅಡುಗೆ ಸಿದ್ದತಾ ವಿಭಾಗಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೂರು ಆಹಾರ ಉಪ ಸಮಿತಿಗಳನ್ನು ನೇಮಿಸಲಾಗಿದೆ.

ಸಮ್ಮೇಳನದಲ್ಲಿ ರುಚಿ, ಶುಚಿಯಾದ ಊಟದ ವ್ಯವಸ್ಥೆ ಸವಾಲಿನ ಕೆಲಸವಾಗಿದ್ದರೂ ಇದರಲ್ಲಿ ಯಾವುದೇ ರಾಜಿ ಇಲ್ಲದೇ ಉತ್ತಮ ದರ್ಜೆಯ ಗುಣಮಟ್ಟದ ಪಧಾರ್ಥಗಳನ್ನು ಅಡುಗೆ ಸಿದ್ದಪಡಿಸಲು ಏಜೆನ್ಸಿಗೆ ಮಾನದಂಡಗಳ ಕರಾರನ್ನು ನೀಡಲಾಗಿದೆ. ಅದರಂತೆ ಏಜೆನ್ಸಿಯು ಗುಣಮಟ್ಟದ ಆಹಾರ ಪಧಾರ್ಥಗಳನ್ನೇ ಬಳಸುತ್ತಾರೆ. ಗುಣಮಟ್ಟವನ್ನು ಪರಿಕ್ಷೀಸಲು ಆಹಾರ ಸುರಕ್ಷತ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಮೂರು ದಿನ ನಿರಂತರ ತಪಾಸಣೆ ಮತ್ತು ಪರೀಕ್ಷೆ ಮಾಡಿದ ನಂತರವೇ ಆಹಾರವನ್ನು ಬಡಿಸಲು ಕ್ರಮ ವಹಿಸಲಾಗುವುದು.

ಲಕ್ಷಾಂತರ ಸಂಖ್ಯೆಯಲ್ಲಿ ಜನರಿಗೆ ಊಟದ ವ್ಯವಸ್ಥೆ ಮಾಡುವುದರ ಜತೆಗೆ ತ್ಯಾಜ್ಯ ವಿಲೇವಾರಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ತ್ಯಾಜ್ಯ ವಿಲೇವಾರಿ ಸಂಬಂಧ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ತ್ಯಾಜ್ಯ ವಿಲೇವಾರಿ ವಾಹನಗಳು ಮತ್ತು ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಮೇಳೈಸಲಿದೆ ಮಂಡ್ಯದ ಸೊಗಡು ಮೂರು ದಿನದ ಊಟೋಪಾಚಾರದಲ್ಲಿ ಮಂಡ್ಯದ ಸೊಗಡಿನ ಮುದ್ದೆ ಸೋಪ್ಪಿನ ಸಾರು, ಮೊಳಕೆ ಕಾಳಿನ ಸಾರು, ಚಿತ್ತಕದ ಬೇಳೆ ಸಾರು, ರಾಗಿ ದೋಸೆ, ತಟ್ಲೆ ಇಡ್ಲಿ ಖಾದ್ಯಗಳು ಇರಲಿದೆ. ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ, ಬದನೆಕಾಯಿ ಹೆಣ್ಣಗಾಯಿ, ಚಟ್ನಿ ಪುಡಿ ಮೊಸರು ಇರಲಿದೆ. ಇದಲ್ಲದೆ ಬೆಲ್ಲದ ಹೊಳಿಗೆ, ಕಾಯಿ ಮಿಠಾಯಿ, ಬಾದೂಷ, ಡ್ರೈ ಜಾಮೂನ್, ಮೈಸೂರು ಪಾಕ್, ಸಹಿ ಪೊಂಗಲ್, ಲಾಡು ಸಿಹಿ ತಿಂಡಿಯನ್ನು ಮಾಡಿಸಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಪ್ರತಿನಿಧಿಗಳು, ಜನಸಾಮಾನ್ಯರಿಗೆಲ್ಲ ಒಂದೇ ರೀತಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಜನದಟ್ಟಣೆ ತಪ್ಪಿಸಲು ಗಣ್ಯರು, ಅತಿ ಗಣ್ಯರು ಮತ್ತು ಸಮಿತಿಯ ಸದ್ಯಸರು, ಮಾಧ್ಯಮದವರು, ಪೊಲೀಸರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು, ವಿಶೇಷಚೇತನರು, ವೃದ್ಧರಿಗೆ ಅಗತ್ಯತೆಗೆ ತಕ್ಕಂತೆ ಕೌಂಟರ್ ಇರಲಿದೆ. ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ, ಗೋಷ್ಠಿ ಭರಾಟೆಗಳ ಜತೆಗೆ ಊಟದ ಭರಾಟೆ ಕೂಡ ಜೋರಾಗಿದೆ. ಬಾಯಿ ಚಪ್ಪರಿಸುವಂತಹ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಶುಚಿ, ರುಚಿಯಿಂದ ಕೂಡಿದ ಬಗೆಬಗೆಯ ಭೋಜನವನ್ನು ಸಾಹಿತ್ಯ ಪ್ರೇಮಿಗಳಿಗೆ ಉಣಬಡಿಸಲು ಭರ್ಜರಿ ಊಟದ ಮೆನು ಸಿದ್ಧಪಡಿಸಲಾಗಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ, ಗೋಷ್ಠಿಗಳು ಕಲಾವಿದರಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತದೋ ಊಟಕ್ಕೂ ಅಷ್ಟೇ ಆದ್ಯತೆ ನೀಡಲಾಗಿದೆ. ಗೋಷ್ಠಿಗಳಲ್ಲಿ ಕನ್ನಡದ ಘಮಲಿದ್ದರೆ, ಊಟದಲ್ಲಿ ಉತ್ತರ ಕರ್ನಾಟಕ ಶೈಲಿಯ ಭೋಜನದ ಘಮಲಿರಲಿದೆ. ಬಗೆಬಗೆಯ ರುಚಿಯಾದ ಶುಚಿಯಿಂದ ಕೂಡಿದ ಊಟದ ವ್ಯವಸ್ಥೆ ಮಾಡಲಾಗಿದೆ. ಊಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಬಂದವರೆಲ್ಲರಿಗೂ ಊಟೋಪಚಾರದ ಆತಿಥ್ಯ ನೀಡಲಾಗುತ್ತದೆ. ರಮೇಶ ಬಂಡಿಸಿದ್ದೇಗೌಡ ಶ್ರೀರಂಗಪಟ್ಟಣ ಶಾಸಕ, ಆಹಾರ ಸಮಿತಿ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net