

ಮಂಡ್ಯ: ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದಾಖಲೆ ಸೃಷ್ಟಿ ಮಾಡಿತು. ಇದರ ನಾಯಕತ್ವ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಎಲ್ಲ ಸಮಿತಿ, ಉಪಸಮಿತಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಮ್ಮೇಳನಾಧ್ಯಕ್ಷರೂ ಆದ ಹಿರಿಯ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಹೇಳಿದರು. ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಜಿಲ್ಲಾ ನಾಗರಿಕ ಅಭಿನಂದನೆ ಸಮಿತಿ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಸಮ್ಮೇಳನದ ಯಶಸ್ವಿನ ರೂವಾರಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕರು, ಅಧಿಕಾರಿಗಳು ಹಾಗೂ ಕಸಾಪ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಅದೃಷ್ಟ ಇದ್ದವರಿಗೆ ಗೆಲುವು ದೊರೆಯುತ್ತದೆ. ಹಾಗೆ ನೋಡಿದರೆ ನಾನು ಕೂಡ ಅದೃಷ್ಟವಂತ. ಏಕೆಂದರೆ ಬಯಸದೇ ಬಂದ ಭಾಗ್ಯವು ಸಮ್ಮೇಳನದಲ್ಲಿ ಸಿಕ್ಕಿತು. ಇಲ್ಲಿ ಅವಿಸ್ಮರಣೀಯವಾಗಿ ಸಮ್ಮೇಳನಕ್ಕಾಗಿ ದುಡಿದವರಿಗೆಲ್ಲ ಅಭಿನಂದಿಸುತ್ತಿರುವುದೇ ಒಂದು ಅದೃಷ್ಟ ಎಂದು ವಿಶ್ಲೇಷಿಸಿದರು. ಮಂಡ್ಯದ ನೆಲಕ್ಕೆ ಸಮ್ಮೇಳನದ ಯಶಸ್ಸು ಸಲ್ಲಬೇಕು. ಇದಕ್ಕೆಲ್ಲ ಶ್ರಮವಹಿಸಿ ಕೆಲಸ ಮಾಡಿದ ಕನ್ನಡಾಭಿಮಾನಿಗಳಿಗೆ ಇದು ಸಲ್ಲಬೇಕು. ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸರ್ಕಾರವು ಪ್ರವೇಶ ಮಾಡಿರಲಿಲ್ಲ, ಇವತ್ತಿಗೂ ಪ್ರವೇಶ ಮಾಡಿಲ್ಲ. ಆದರೂ ಇತಿಹಾಸದಲ್ಲಿ ಕಂಡುಕಾಣರಿಯದಂತೆ ಅಭೂತಪರ್ವ ಬೆಂಬಲ ರಾಜಕಾರಣಿಗಳಿಗಿಂತ ಸಿಕ್ಕಿತು. ಸಮ್ಮೇಳನದ ವೇದಿಕೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಅದರಂತೆ ಈ ಸಮ್ಮೇಳನದಲ್ಲಿ ಕಂಡಿರುವುದು ವಿಶೇಷ. ಕನ್ನಡದ ನುಡಿ ಹಾಗೂ ಸಾಂಸ್ಕೃತಿಕ ಜಾತ್ರೆಯಲ್ಲಿ ಕನ್ನಡಿಗರು ಭಾಗವಹಿಸಿ ತಮ್ಮ ಮನೆಯ ಶುಭ ಸಮಾರಂಭವೆಂಬಂತೆ ನಡೆಸಿಕೊಟ್ಟರು ಎಂದು ಶ್ಲಾಘಿಸಿದ ಅವರು, ನಗುಮುಖ ಇಲ್ಲದವರು ಜನಪ್ರತಿನಿಧಿ, ಮಠಾಧಿಪತಿ, ಅತ್ತೆ ಸೊಸೆ ಆಗಬಾರದು. ಒಟ್ಟಿನಲ್ಲಿ ನಗುಮುಖವಿಲ್ಲದೇ ಇರುವವರು ಮನುಷ್ಯರೇ ಆಗಬಾರದು ಎಂದು ಹಾಸ್ಯಚಟಾಕಿ ಹಾರಿಸಿದಾಗ ನೆರದಿದ್ದವರು ನಗೆಗಡಲಲ್ಲಿ ತೇಲಿದರು. ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸರ್ಕಾರವೇ ನಡೆಸಬೇಕೆಂಬ ಸ್ಥಿತಿಗೆ ಸಾಹಿತ್ಯ ಪರಿಷತ್ ಪರಿಷತ್ ಮತ್ತು ಸಾಹಿತಿಗಳು ತಂದು ನಿಲ್ಲಿಸಿದ್ದಾರೆ. ಸಮ್ಮೇಳನ ಆಯೋಜಿಸುವುದು ಅಷ್ಟು ಸುಲಭದ ಮಾತಲ್ಲ. ಸರ್ಕಾರಕ್ಕೆ ಅದರದೇ ಆದ ಜವಾಬ್ದಾರಿಗಳಿರುತ್ತವೆ. ಅದರ ನಡುವೆ ಸಚಿವರು ಮತ್ತು ಶಾಸಕರುಗಳಿಗೂ ಕೆಲಸಗಳಿರುತ್ತವೆ. ಸಮ್ಮೇಳನಗಳನ್ನು ಇವರೇ ನಡೆಸಬೇಕೆನ್ನುವುದು ತರವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗೋಕಾಕ್ ಚಳವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಹಿತಿಗಳು ಪ್ರತಿಭಟನೆ ನಡೆಸುತ್ತಿದ್ದರು. ಸಾಹಿತಿಗಳನ್ನು ನಿಯಂತ್ರಿಸುವುದು ಅಷ್ಟು ಸುಲಭದ ಕೆಲಸವವಾಗಿರಲಿಲ್ಲ. ಅವರನ್ನು ಸಿಲ್ಕ್ ದಾರದಲ್ಲಿ ಕಟ್ಟಿಟ್ಟುಕೊಂಡು ಬಹಳ ನಾಜೂಕಾಗಿ ನಿರ್ವಹಣೆ ಮಾಡಬೇಕೆಂಬುದನ್ನು ತಿಳಿದುಕೊಂಡೆ. ಇಲ್ಲವಾದರೆ ಬೇರೆ ಇನ್ನಾವುದೇ ಹಗ್ಗದಿಂದ ಕಟ್ಟಲು ಸಾಧ್ಯವಾಗುವುದಿಲ್ಲ. ಆದರೆ ಇಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಅಚ್ಚುಕಟ್ಟಾಗಿ ನಿಭಾಯಿಸಿದರು. ಅಧಿಕಾರ ಮತ್ತು ಹಣಕ್ಕೆ ಬೆಲೆ ಕೊಡದೆ ಪ್ರಬುದ್ಧವಾಗಿ ಸಮ್ಮೇಳನ ನಡೆಸಿಕೊಟ್ಟು ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ದರ್ಶನ್ ಪುಟ್ಟಣ್ಣಯ್ಯ, ರಮೇಶ ಬಂಡಿಸಿದ್ದೇಗೌಡ, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮಾಜಿ ಶಾಸಕ ಎಚ್.ಬಿ.ರಾಮು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಇತರರಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಸಂಗೀತ ಸಂಜೆ ನಡೆಯಿತು.
ಮೂರು ದಶಕದ ಬಳಿಕ ಮಂಡ್ಯಕ್ಕೆ ಸಿಕ್ಕಿದಂತಹ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಸಾಧಿಸಿದಲ್ಲದೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು. ಇದಕ್ಕೆ ಕಾರಣ ಸಚಿವ ಎನ್.ಚಲುವರಾಯಸ್ವಾಮಿ ಅವರ ನಾಯಕತ್ವ. ಎಲ್ಲ ಶಾಸಕರು, ಅಧಿಕಾರಿಗಳು ಹಾಗೂ ಕಸಾಪ ಸೇರಿದಂತೆ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಈ ಬಗ್ಗೆ ಗೊ.ರು.ಚನ್ನಬಸಪ್ಪ ಅವರು ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಎಲ್ಲರನ್ನು ಅಭಿನಂದಿಸಲಾಗಿದೆ. ಸಿ.ತ್ಯಾಗರಾಜು ತಾಪಂ ಮಾಜಿ ಅಧ್ಯಕ್ಷ, ಜಿಲ್ಲಾ ನಾಗರಿಕ ಅಭಿನಂದನೆ ಸಮಿತಿ ಖಜಾಂಚಿ