ಅಕ್ಷರ ಕಲಿಸಿದ ಶಾಲೆ ಪ್ರಗತಿಗೆ ಶ್ರಮಿಸಿ

HLK SANMANA 19
Published on

ಹೊಳಲ್ಕೆರೆ: ಅಕ್ಷರ ಕಲಿಸಿದ ಶಾಲೆ, ಗುರು, ಜನ್ಮನೀಡಿದ ತಂದೆ-ತಾಯಿ ಕುರಿತು ಕೃತಜ್ಞತಭಾವ ಹೊಂದಿದವರು ಉನ್ನತ ಸ್ಥಾನಮಾನ ಜತೆಗೆ ನೆಮ್ಮದಿ ಜೀವನ ನಡೆಸುತ್ತಾರೆ ಎಂದು ನಿವೃತ್ತ ಶಿಕ್ಷಕಿ ಎಂ.ಎಸ್.ಪದ್ಮಾವತಿ ತಿಳಿಸಿದರು.

ತಾಲೂಕಿನ ಅರೇಹಳ್ಳಿ ಗ್ರಾಮದ ಎಂ.ಜಿ.ಬೋರಯ್ಯನಾಯಕ ಪ್ರೌಢಶಾಲೆ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳು ಈಚೆಗೆ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕ ಜಗತ್ತು, ಸ್ಪರ್ಧಾತ್ಮಕ ಯುಗದಲ್ಲಿ ಗುರುಪರಂಪರೆಯೇ ಮರೆಯಲಾಗುತ್ತಿದೆ. ಆದರೆ, ಈ ಶಾಲೆಯ 1997-98ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುವ ಕಾರ್ಯ ಕೈಗೊಂಡಿರುವುದು ಹಾಗೂ ಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆ ನೀಡಿರುವುದು ಮಾದರಿ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತಿ ನಂತರ ನಮ್ಮನ್ನು ನಮ್ಮ ವಿದ್ಯಾರ್ಥಿಗಳು ಮರೆತೇ ಬಿಟ್ಟಿದ್ದಾರೆ ಎಂಬ ನೋವು ಬಹಳಷ್ಟು ಶಿಕ್ಷಕರಲ್ಲಿ ಸದಾ ಕಾಡುತ್ತದೆ. ಅಂತಹ ಕೊರತೆ ನೀಗಿಸುವ ಕೆಲಸವನ್ನು ನಮ್ಮ ವಿದ್ಯಾರ್ಥಿಗಳು ಮಾಡಿರುವುದು ಸ್ಮರಣೀಯ ಎಂದು ಭಾವುಕರಾದರು.

ನಿವೃತ್ತ ಮುಖ್ಯಶಿಕ್ಷಕ ಎಲ್.ರಾಮಚಂದ್ರ ಮಾತನಾಡಿ, ಶಾಲೆ ಶೈಕ್ಷಣಿಕವಾಗಿ ಬಹಳಷ್ಟು ಸಾಧನೆಯತ್ತ ಸಾಗುತ್ತಿದೆ. ಇಲ್ಲಿನ ಮಕ್ಕಳು ಕ್ರೀಡೆ, ಕಲಿಕೆಯಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಇದು ನಮ್ಮ ಹೆಮ್ಮೆ ಎಂದರು.

ಮುಖ್ಯಶಿಕ್ಷಕ ಕೆ.ಎಂ.ಪ್ರಶಾಂತ್ ಕುಮಾರ್ ಮಾತನಾಡಿ, ಹಳೇ ವಿದ್ಯಾರ್ಥಿಗಳು ತಮಗೆ ಅಕ್ಷರ ಕಲಿಸಿದ ಗುರುಗಳು ಹಾಗೂ ಅವರ ಕುಟುಂಬದ ಸದಸ್ಯರ ಮಾಹಿತಿ ಕಲೆಹಾಕಿ, ಅವರನ್ನು ಸಮಾರಂಭಕ್ಕೆ ಕರೆಯಿಸಿ ಸನ್ಮಾನಿಸಿರುವುದು ನಮ್ಮ ಶಾಲೆಯ ಕೀರ್ತಿ ಹೆಚ್ಚಿಸಿದೆ ಎಂದು ಹೇಳಿದರು.

ಗುರುಗಳನ್ನು ಸ್ಮರಿಸುವ, ಗೌರವಿಸುವ ಕಾರ್ಯಗಳು ಎಲ್ಲೆಡೆ ನಡೆಯುತ್ತಿರಬೇಕು. ಜತೆಗೆ ಶೈಕ್ಷಣಿಕವಾಗಿ ಸಾಧನೆ ಮಾಡಿ, ಉನ್ನತ ಸ್ಥಾನಮಾನ ಪಡೆದರೆ ಅದು ಅಕ್ಷರ ಕಲಿಸಿದ ಶಿಕ್ಷಕರಿಗೆ ನೀಡುವ ನಿಜವಾದ ಕೊಡುಗೆ, ಗೌರವ ಎಂದು ತಿಳಿಸಿದರು.
ಅಶ್ವಿನಿ, ಅನಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net